ಶಿರೂರು : ಮುಂದುವರಿದ ಡ್ರೆಜ್ಜಿಂಗ್ ಮಷಿನ್ ಕಾರ್ಯಾಚರಣೆ: ಮಣ್ಣು ಬಗೆದಷ್ಟೂ ಅವಶೇಷಗಳು ಪತ್ತೆ..!: ಗಂಗಾವಳಿ ನದಿಯಲ್ಲಿ ಸಿಕ್ಕಿರೋದು ಏನೆಲ್ಲಾ..?

ಕಾರವಾರ: ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಇನ್ನೂ ಕೂಡ ಮೂವರ ಮೃತದೇಹ ಪತ್ತೆಯಾಗಿಲ್ಲದ ಕಾರಣ ಡ್ರೆಜ್ಜಿಂಗ್ ಮಷಿನ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದೀಗ ಕಾರ್ಯಾಚರಣೆ 5ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿದಿನ ಗಂಗಾವಳಿ ನದಿಯಲ್ಲಿ ಒಂದಿಲ್ಲೊಂದು ವಸ್ತುಗಳು ಪತ್ತೆಯಾಗುತ್ತಲೇ ಇದೆ.

ಗಂಗಾವಳಿ ನದಿಯಿಂದ ಮಣ್ಣು ಬಗೆದಷ್ಟೂ ಅವಶೇಷಗಳು ಸಿಗುತ್ತಿವೆ. ಶನಿವಾರ ನದಿಯಲ್ಲಿ ಸಿಕ್ಕ ದೊಡ್ಡ ಗಾತ್ರದ ಮೂಳೆ ಡಿಎನ್‌ಎ ಪರೀಕ್ಷೆಯ ಮೂಲಕ ಜಾನುವಾರುವಿನ ಮೂಳೆ ಎನ್ನುವುದು ಖಚಿತವಾಗಿದೆ.

ಈವರೆಗೆ ಲಾರಿಯ ಕ್ಯಾಬಿನ್, ಮುಂಭಾಗದ ಎರಡು ಚಕ್ರ, ಇಂಜಿನ್ ಪತ್ತೆಯಾಗಿದೆ. ಅವುಗಳು ನಾಪತ್ತೆಯಾದ ವಾಹನಗಳದ್ದೇ ಎಂದು ಗುರುತಿಸಲಾಗಿದೆ.
ಸೋಮವಾರ ತಮಿಳುನಾಡಿನ ಗ್ಯಾಸ್ ಟ್ಯಾಂಕರ್ ನ ಇಂಜಿನ್ ಭಾಗಗಳು, ಹಿಂಭಾಗದ ಟಯರ್‌ಗಳು, ಹೈಪವರ್ ಲೈನ್‌ನ ತುಂಡಾದ ಕಂಬಗಳು, ಲಾರಿಯ ವೈಪರ್, ಕಬ್ಬಿಣದ ಕೆಲವು ತುಂಡುಗಳು ಹಾಗು ಕೆಲವು ಬಟ್ಟೆಗಳು, ಟ್ರಕ್‌ನ ಹಿಂಬದಿಯ ಎಕ್ಸೆಲ್‌ಸಹಿತ ನಾಲ್ಕು ಚಕ್ರಗಳು ದೊರೆತಿವೆ.

ಇನ್ನೊಂದೆಡೆ, ಯಾವುದೇ ದೂರು ದಾಖಲಾಗದೇ ಇದ್ದರೂ ಕಾರ್ಯಾಚರಣೆ ವೇಳೆ ಆ್ಯಕ್ಟಿವಾ ಸ್ಕೂಟಿ ಹಾಗೂ ಹಿಂದೂಜಾ ಗ್ರೂಪ್‌ಗೆ ಸೇರಿದ ಲಾರಿಯೊಂದರ ಇಂಜಿನ್ ಪ್ಲೇಟ್ ಕೂಡ ಪತ್ತೆಯಾಗಿದೆ. ಈ ಕಂಪನಿಯ ಲಾರಿ ಕಣ್ಮರೆಯಾದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಗುಡ್ಡ ಕುಸಿತ ಸಂದರ್ಭದಲ್ಲಿ ಇಂದ್ರಬಾಲನ್ ತಂಡ ಗಂಗಾವಳಿ ನದಿಯಲ್ಲಿ ನಾಲ್ಕು ಸ್ಥಳಗಳನ್ನು ಗುರುತಿಸಿದ್ದು, 2 ಸ್ಥಳದಲ್ಲಿ ಡ್ರೆಜ್ಜರ್ ಕಾರ್ಯಾಚರಣೆ ನಡೆಸಲಾಗುತ್ತಿದೆ. 1 ಮತ್ತು 2ನೇ ಪಾಯಿಂಟ್ ನಲ್ಲಿ ಲಾರಿಯ ಅವಶೇಷಗಳು ಸಿಕ್ಕಿವೆ. 4ನೇ ಪಾಯಿಂಟ್‌ನಲ್ಲಿ ಅರ್ಜುನ್ ಚಲಾಯಿಸುತ್ತಿದ್ದ ಭಾರತ್ ಬೆಂಜ್ ಟ್ರಕ್ ಇದೆ. ಸುಮಾರು 4-5 ಅಡಿ ಆಳದಲ್ಲಿ ಟ್ರಕ್ ಇರುವುದು ಸ್ಕ್ಯಾನಿಂಗ್‌ನಲ್ಲಿ ತೋರಿಸಿದೆ.

error: Content is protected !!