ಮಂಗಳೂರು: ಮದುವೆಯಾಗುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೋ ವಿಶೇಷ ನ್ಯಾಯಾಲಯ ಸೆ.21ರಂದು ತೀರ್ಪು ನೀಡಿದೆ.
2022ರ ಆಗಸ್ಟ್ 9ರಂದು ಅಪರಾಧಿಯು ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354, 376, ಪೋಕೋ ಕಾಯ್ದೆ ಮತ್ತು ಐ.ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ತನಿಖೆ ಪೂರ್ಣಗೊಳಿಸಿ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದೀಗ ಆರೋಪಿ ವಿರುದ್ಧದ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಅಪರಾಧಿಯು ಬಾಲಕಿಯ ದೂರದ ಸಂಬಂಧಿಯಾಗಿದ್ದು ಈತ ಬಾಲಕಿಯ ತಾಯಿಯ ಮೊಬೈಲ್‌ಗೆ ಕರೆ ಮಾಡಿ ಬಾಲಕಿಯೊಂದಿಗೆ ಮಾತನಾಡುತ್ತಿದ್ದ. ಬಳಿಕ ಫೇಸ್‌ಬುಕ್‌ನಲ್ಲಿ ಸಂಪರ್ಕ ಮಾಡಿ, 2022ರ ಆಗಸ್ಟ್ 9ರಂದು ಬಾಲಕಿಯ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದೆ ಇದ್ದುದನ್ನು ಗಮನಿಸಿ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ. ಬಾಲಕಿಯ ಮನೆಯಿಂದ ತೆರಳಿದ ಬಳಿಕ ಫೇಸ್‌ಬುಕ್‌ನಲ್ಲಿ ಅಶ್ಲೀಲ ಸಂದೇಶ ರವಾನಿಸಿದ್ದಾನೆ. ನಂತರ ಮತ್ತೊಂದು ಸಂದೇಶದಲ್ಲಿ, “ನಿನ್ನೆ ನಾನು ದೊಡ್ಡ ತಪ್ಪು ಮಾಡಿಬಿಟ್ಟೆ, ದಯವಿಟ್ಟು ಕ್ಷಮಿಸು. ಇನ್ನು ಮುಂದೆ ಯಾವತ್ತೂ ಹೀಗೆ ಮಾಡಲ್ಲ, ನೀನು ಯಾವಾಗಲೂ ಸಂತೋಷವಾಗಿರು, ನಾನು ಇನ್ನು ಮುಂದೆ ನಿನಗೆ ತೊಂದರೆ ಕೊಡಲ್ಲ, ನನ್ನಷ್ಟಕ್ಕೆ ನಾನಿರುವೆ” ಎಂದು ತಿಳಿಸಿದ್ದ. ಇದರಿಂದ ನೊಂದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಳು.
ಅಪರಾಧಿಗೆ ನ್ಯಾಯಾಲಯವು ಪೊಕ್ಸೋ ಕಾಯ್ದೆಯಂತೆ ದಂಡಸಮೇತ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ದಂಡದ ಮೊತ್ತವನ್ನು ಸಂತ್ರಸ್ತೆಗೆ ನೀಡುವಂತೆ ಆದೇಶದಲ್ಲಿ ಸೂಚಿಸಿದೆ. ಅಲ್ಲದೆ ದಂಡ ಪ್ರಕ್ರಿಯೆ ಸಂಹಿತೆಯ ಕಲಂ: 357(ಎ) ಪ್ರಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ಬಾಲಕಿಗೆ ಹೆಚ್ಚುವರಿಯಾಗಿ ರೂಪಾಯಿ 1,50,000 ರೂ ಪರಿಹಾರ ನೀಡುವಂತೆ ತೀರ್ಪಿನಲ್ಲಿ ಜಿಲ್ಲಾ ಕಾನೂನುಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬದರಿನಾಥ ನಾಯರಿ ವಾದ ಮಂಡಿಸಿದ್ದರು.