ಬೆಳ್ತಂಗಡಿ: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೂರು ಮಾರ್ಗದ ಜಂಕ್ಷನ್ ಬಳಿ ಇರುವ ಹೈಮಾಸ್ಟ್ ಕಂಬದಲ್ಲಿ ಇರುವ ಲೈಟ್ ನೇತಾಡುತಿದ್ದು ಅಪಾಯದ ರೀತಿಯಲ್ಲಿದೆ.
ಮೂರು ಮಾರ್ಗದ ಜಂಕ್ಷನ್ ನಲ್ಲಿ ಇರುವ ಈ ಹೈಮಾಸ್ಟ್ ಕಂಬದಲ್ಲಿ ಇರುವ ಬೀದಿದೀಪಗಳ ಒಂದು ಬದಿಯ ಸ್ಟೇ ತುಂಡಾಗಿ ನೇತಾಡಿಕೊಂಡು ಬೀಳುವ ರೀತಿಯಲ್ಲಿ ಕಾಣುತ್ತಿದೆ. ಒಂದು ವೇಳೆ ಅಕಸ್ಮಾತ್ ತುಂಡಾಗಿ ಬಿದ್ದಲ್ಲಿ ಅಪಾಯ ಸಂಭವಿಸಬಹುದು, ಅದಲ್ಲದೇ ಅದಕ್ಕೆ ಅಳವಡಿಸಿದ ವಿದ್ಯುತ್ ವಯರ್ ತುಂಡಾಗಿ ಕಂಬಕ್ಕೆ ಸ್ಪರ್ಶಿಸಿ ಕಂಬದಲ್ಲಿ ವಿದ್ಯುತ್ ಪ್ರವಹಿಸುವ ಅಪಾಯವೂ ಇದೆ.
ಈ ಬಗ್ಗೆ ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಕಣ್ಣು ಮುಚ್ಚಿ ಕುಳಿತಿದ್ದಾರೆ. ನಗರದ ಮುಖ್ಯ ಪೇಟೆಯಲ್ಲೇ ಅದಲ್ಲದೇ ದಿನನಿತ್ಯ ತಾಲೂಕು ಕಛೇರಿ, ಕೋರ್ಟ್, ಪೊಲೀಸ್ ಠಾಣೆ, ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳಿಗೆ ದಿನಂಪ್ರತಿ ನೂರಾರು ಸಾರ್ವಜನಿಕರು ಇದೇ ರಸ್ತೆಯಲ್ಲಿ ಸಂಚರಿಸುತಿದ್ದು, ಇಂತಹ ಜನನಿಬಿಡ ಸ್ಥಳದಲ್ಲಿ ಈ ರೀತಿ ನಿರ್ವಹಣೆ ಇಲ್ಲದೇ ಅಪಾಯ ಸ್ಥಿತಿಯಲ್ಲಿ ಇದ್ದರೂ ಸರಿಪಡಿಸಲು ಕ್ರಮ ಕೈಗೊಳ್ಳದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಪಟ್ಟಣ ಪಂಚಾಯತ್ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದ್ದು ತಕ್ಷಣ ಈ ಬಗ್ಗೆ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸಾರ್ವಜನಿಕರ ಪರವಾಗಿ ಆಗ್ರಹಿಸಿದ್ದಾರೆ.