ಬೆಂಗಳೂರು: ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಲಿದ್ದು ಸೆ.16 ರಿಂದ ದಂಡ ಪ್ರಯೋಗ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಮೊದಲು ಹಲವು ಬಾರಿ ಕೊನೆಯ ದಿನಾಂಕ ನಿಗದಿಗೊಳಿಸಲಾಗಿತ್ತಾದರೂ ಲಕ್ಷಾಂತರ ವಾಹನಗಳ ಎಚ್‌ಎಸ್‌ಆರ್‌ಪಿ ಬಾಕಿ ಇರುವುದರಿಂದ ಮತ್ತಷ್ಟು ಗಡುವು ವಿಸ್ತರಿಸಲಾಗಿತ್ತು. ಇದೀಗ ಸೆ.15 ಕೊನೆಯ ದಿನ ಎಂದು ಹೇಳಲಾಗುತ್ತಿದೆ.
ಸೆ.16ರ ರಿಂದ ಪೊಲೀಸ್ ಇಲಾಖೆ ಜೊತೆಗೂಡಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದ್ದು, ಅವಧಿಯೊಳಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ 500 ರೂ.ನಿಂದ 1,000 ರೂ.ವರೆಗೆ ದಂಡ ವಿಧಿಸಲಿದೆ ಎಂದು ಹೇಳಲಾಗಿದೆ.