ಬದುಕಿನ ಕನಸು ತಲುಪುವುದು ಎಷ್ಟೋ ಮಕ್ಕಳ ಬಹುದೊಡ್ಡ ಆಸೆ. ಅದನ್ನು ತಲುಪಿದ ಬಳಿಕವೇ ಅವರಿಗೆ ಸಂತೃಪ್ತಿ. ಆದರೆ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊನೆಯುಸಿರೆಳೆದ ವೈದ್ಯೆಗೆ ಮಾತ್ರ ಆ ಸಂತೃಪ್ತಿಯನ್ನು ಅನುಭವಿಸಲು ಕಾಮುಕರು ಅವಕಾಶವೇ ನೀಡಲಿಲ್ಲ. ಇದು ಆಕೆಯ ಪೋಷಕರ ಹೃದಯ ಛಿದ್ರಗೊಳಿಸಿದ ಘಟನೆ.
ಅವರದ್ದು ಮಧ್ಯಮ ವರ್ಗದ ಸುಂದರ ಕುಟುಂಬ, ವೈದ್ಯೆಯಾಗುವ ಮೂಲಕ ಇಡೀ ಕುಟುಂಬವೇ ಹೆಮ್ಮೆ ಪಡುವಂತೆ ಮಾಡಿದ್ದ ಮಗಳ ಕಂಡರೆ ಎಲ್ಲರಿಗೂ ಪ್ರೀತಿ. ಕೋಲ್ಕತ್ತಾದಲ್ಲಿ ತಮ್ಮ ಜೀವನವನ್ನು ಸಂತೋಷದಿAದ ಕಳೆಯುತ್ತಿದ್ದ ಅವರಿಗೆ ತಮ್ಮ ಮನೆಮಗಳು ವೈದ್ಯೆ ಅನ್ನುವುದೇ ದೊಡ್ಡ ಸಂತೋಷ. ಆಕೆ ತನ್ನ ಸೇವೆಯ ಮಧ್ಯೆಯೂ ಪ್ರತೀ ರಾತ್ರಿ ಪೋಷಕರಿಗೆ ಕರೆ ಮಾಡುವವಳು. ಆ. 9ರಂದು ಕೂಡ ರಾತ್ರಿ 11.30ರ ಸುಮಾರಿಗೆ ಅವಳು ತಾಯಿಗೆ ಕರೆ ಮಾಡಿ ಸುಮಾರು ಅರ್ಧ ತಾಸು ಮಾತನಾಡಿದ್ದಾಳೆ. ಆದರೆ ಬೆಳಗಾಗುವಷ್ಟರಲ್ಲಿ ಆಕೆಯ ಸಾವಿನ ಸುದ್ದಿ ಕೇಳಿ ಪೋಷಕರು ಕುಸಿದುಬಿದ್ದಿದ್ದರು.
ಮಗಳು ಇನ್ನಿಲ್ಲ ಎನ್ನುವ ದುಃಖದ ಜತೆಗೆ ಆಕೆ ಸಾಯುವ ಕೊನೆಯ ಕ್ಷಣದವರೆಗೆ ಅನುಭವಿಸಿದ ಆ ನೋವು, ಸಂಕಟ, ಚಿತ್ರಹಿಂಸೆ ಇವುಗಳೇ ಆಕೆಯ ಪೋಷಕರನ್ನು ಹೆಚ್ಚಾಗಿ ಕಾಡತೊಡಗಿದೆ.
ಘಟನೆಯನ್ನು ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಮೊದಲು ಅತ್ಯಾಚಾರ ಮಾಡಿದ್ದು ನಾನೇ ಎಂದು ಒಪ್ಪಿಕೊಂಡಿದ್ದ ಆರೋಪಿ ಸಂಜಯ್ ರಾಯ್ ಇದ್ದಕ್ಕಿದ್ದಂತೆ ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು ಎನ್ನುವ ಗೊಂದಲದ ಹೇಳಿಕೆಯನ್ನು ನೀಡಿ ತಾನು ನಿರಪರಾಧಿ ಎಂದು ಹೇಳಿದ್ದಾನೆ. ಆದರೆ ಘಟನಾ ಸ್ಥಳದಲ್ಲಿ ಬ್ಲೂಟೂತ್ ಪತ್ತೆಯಾಗಿದೆ.