ಬೆಳ್ತಂಗಡಿ: ನಿವೃತ್ತ ಶಿಕ್ಷಕರೊಬ್ಬರನ್ನು ಹಗಲು ಹೊತ್ತಿನಲ್ಲಿ ಕೊಲೆಗೈದು ಹಂತಕ ಪರಾರಿಯಾದ ಘಟನೆ ಬೆಳಾಲು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಎಸ್ ಪಿ ಬಿ ಕಾಂಪೌಂಡ್ ನಿವಾಸಿ ನಿವೃತ್ತ ಶಿಕ್ಷಕ ಎಸ್ ಪಿ ಬಾಲಕೃಷ್ಣ ಭಟ್(83) ಎಂಬವರೇ ಬರ್ಬರವಾಗಿ ಕಗ್ಗೊಲೆಯಾದ ವ್ಯಕ್ತಿ.
ಮೃತರ ಹಿರಿಯ ಪುತ್ರ ಸುರೇಶ್ ಭಟ್ 3 ಗಂಟೆಗೆ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಧರ್ಮಸ್ಥಳ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಮಧ್ಯಾಹ್ನದ ಬಳಿಕ ಮನೆಯೊಳಗಿದ್ದ ವೇಳೆ ಹಂತಕರು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮನೆಯ ಅಂಗಳಕ್ಕೆ ಓಡಿ ಬಂದಿದ್ದಾರೆ. ಇದೇ ವೇಳೆ ಹಂತಕರು ದಾಳಿ ಮಾಡಿದ್ದಾರೆ.
ಕುತ್ತಿಗೆ, ಕೈಗೆ, ತಲೆ ಭಾಗಗಳಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡ ಪರಿಣಾಮ ಬಾಲಕೃಷ್ಣ ಭಟ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇನ್ನೊಂದೆಡೆ ಮನೆಯಲ್ಲಿ ಕಳ್ಳತನ ಆಗಿದೆಯಾ ಎಂದು ಪರಿಶೀಲನೆ ನಡೆಸಲಾಗಿದ್ದು ಯಾವುದೇ ಚಿನ್ನಾಭರಣ ಕಳ್ಳತನವಾಗಿಲ್ಲ ಎಂಬುದು ಗೊತ್ತಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್,ಡಿವೈಎಸ್ಪಿ ವಿಜಯ ಪ್ರಸಾದ್, ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಸಬ್ ಇನ್ಸ್ ಪೆಕ್ಟರ್ ಕಿಶೋರ್.ಪಿ., ಎಫ್.ಎಸ್.ಎಲ್ ತಂಡ, ಬೆರಳಚ್ಚು ತಂಡ ಭೇಟಿ ನೀಡಿ ಅಗತ್ಯ ಪರಿಶೀಲನೆ ನಡೆಸಿದ್ದಾರೆ.
ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಪೊಲೀಸರ ಮುಂದಿನ ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ.