ಬೆಳ್ತಂಗಡಿ: ಪುಂಜಾಲಕಟ್ಟೆ ಚಾರ್ಮಡಿ ರಾಷ್ಟೀಯ ಹೆದ್ದಾರಿ ಹಿತರಕ್ಷಣಾ ವೇದಿಕೆ ಸಮಿತಿ, ಬೆಳ್ತಂಗಡಿ ಇದರ ವತಿಯಿಂದ ಪುಂಜಾಲಕಟ್ಟೆ ಚಾರ್ಮಡಿ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾಮಗಾರಿಯನ್ನು ಕಾಲಮಿತಿಯಲ್ಲಿ ವೈಜ್ಞಾನಿಕವಾಗಿ ನಿರ್ಮಿಸಿ ಪೂರ್ಣಗೊಳಿಸಬೇಕು ಮತ್ತು ಹೆದ್ದಾರಿ ಗುತ್ತಿಗೆಯಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗೆ ಒಳಪಡಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಆ.19ರಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ಜನಾಗ್ರಹ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾ.ಹೆದ್ದಾರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಕ್ಷಿತ್ ಶಿವರಾಂ ಅವರು ಹೆದ್ದಾರಿ ಹಿತರಕ್ಷಣಾ ವೇದಿಕೆ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ. “ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ವೇದಿಕೆ ಅಭಿವೃದ್ದಿಗೆ ವಿರುದ್ಧ ಅಲ್ಲ, ಬದಲಾಗಿ ಕಾಮಗಾರಿ ಕಾಲಮಿತಿಯೊಳಗೆ ನಡೆಯಬೇಕು, ಅಲ್ಲಿಯವರೆಗೆ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಬೇಕು, ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಒತ್ತಾಯದ ಜೊತೆ ಎಚ್ಚರಿಕೆಯನ್ನು ನೀಡುತ್ತದೆ. ಕಾಮಗಾರಿಯಿಂದ ಸಮಸ್ಯೆ ಎದುರಿಸುವವರ ಜೊತೆ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ವೇದಿಕೆ ಇರುತ್ತದೆ” ಎಂದು ಭರವಸೆ ನೀಡಿದ್ದಾರೆ.
ಭ್ರಷ್ಟಾಚಾರದ ವಿಚಾರವಾಗಿ ಶಾಸಕ ಹರೀಶ್ ಪೂಂಜರ ಮೇಲೆ ವಾಗ್ದಾಳಿ ನಡೆಸಿದ ಅವರು, “ಇಲ್ಲಿ ‘ಹೈವೇ ಮಾಫಿಯಾ’ ನಡೆಯುತ್ತಿದೆ, ಹೆದ್ದಾರಿ ಕಾಮಗಾರಿಯ ಟೆಂಡರ್ ಗಳು ಕೆಲಸ ಆರಂಭಿಸಿದ ಸ್ವಲ್ಪ ದಿನದಲ್ಲೇ ಕಾಮಗಾರಿ ಅರ್ಧಕ್ಕೆ ಬಿಟ್ಟು ಹೋಗುತ್ತಿದ್ದಾರೆ. ಈ ಪ್ರಸಂಗಕ್ಕೆ ಸೂತ್ರದಾರರು ಯಾರು? ಅವರ ಹೆಸರು ಬಯಲು ಮಾಡ್ತೇವೆ. ಡಿಪಿ ಜೈನ್ ಕಂಪನಿಗೆ 106 ಕೋಟಿ ರೂ ಬಿಡಗಡೆ ಮಾಡಿದ್ದಾರೆ. ಆದರೆ ಕೇವಲ 40 ಕೋಟಿ ರೂ. ಕೆಲಸ ಮಾತ್ರ ಆಗಿದೆ. ಶಾಸಕ ಹರೀಶ್ ಪೂಂಜ ಡಿಪಿ ಜೈನ್ ಕಂಪನಿ ಮುಂದೆ 3 ಅಲ್ಲ 5 ಕೋಟಿಯ ಬೇಡಿಕೆಯನ್ನು ಇಟ್ಟಿದ್ದಾರೆ. ಇದೇ ಕಾರಣಕ್ಕೆ ಅವರೆಲ್ಲ ಕಾಮಗಾರಿ ಅರ್ಧಕ್ಕೆ ಬಿಟ್ಟು ಹೋಗುತ್ತಿದ್ದಾರೆ. 1 ರೂ ಮುಟ್ಟಿಲ್ಲ ಎಂದಿರುವ ನೀವು, ಕೋಟಿ-ಕೋಟಿ ಲೂಟಿ ಮಾಡಿದ್ದೀರಿ. ನಾವು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇವೆ. ಮುಂದೆ ಎಸ್ ಐಟಿಗೂ ದೂರು ಕೊಡುವವರಿದ್ದೇವೆ. ನನಗೆ ಕಾಗೆ ಅಂತ ಹೇಳಿ ನಿಮ್ಮ ಬಣ್ಣ ಕೂಡ ನನ್ನ ಬಣ್ಣದ ಹಾಗೆ ಆಗಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಭಷ್ಟಾಚಾರದ ಫಲವಾಗಿ ತಾಲೂಕಿನಲ್ಲಿ ತಡೆಗೋಡೆ, ಸೇತುವೆ, ಕಾಮಗಾರಿಗಳು ನೆಲಕ್ಕುರುಳುತ್ತಿದೆ. ಇದನ್ನು ಕೇಳಿದ್ರೆ ಕುಟುಂಬದ ಮೇಲೆ ಆಪಾದನೆ ಮಾಡುತ್ತೀರಿ. ನಮ್ಮ ಕುಟುಂಬದವರನ್ನು ಲೋಕಾಯುಕ್ತ ತನಿಖೆ ಮಾಡಿಲಿ. ಆಗ ನಾವು ನಿಮ್ಮ ಹಾಗೆ ಕಾರ್ಯಕರ್ತರನ್ನು ಮುಂದೆ ಬಿಡಲ್ಲ, ಕಾರ್ಯಕರ್ತರ ಹಿಂದೆ ಬಚ್ಚಿಡ್ಕೊಳೋದಿಲ್ಲ. ಧೈರ್ಯವಾಗಿ ವಿಚಾರಣೆ ಎದುರಿಸುತ್ತೇವೆ. ದೇವಸ್ಥಾನಕ್ಕೆ ರಕ್ಷಿತ್ ಶಿವರಾಂ ಬರಬಾರದು ಎಂದಿರುವ ನೀವೇ, ನನ್ನನ್ನು ದೇವಸ್ಥಾನಕ್ಕೆ ಬನ್ನಿ ಎಂದು ಕರೆಯುತ್ತಿದ್ದೀರಿ. ಮಾರಿಗುಡಿಯ ಪರಿಚಯ ನಿಮಗಾ ಇಲ್ಲಾ ನಮಗಾ ನೋಡೋಣ. ನೀವು ದೇವಾಲಯದಲ್ಲಿ ಪ್ರಮಾಣ ಮಾಡಿದ್ರೆ ನಾವು ನ್ಯಾಯಾಲಯದ ಕಟಕಟೆಯಲ್ಲಿ ನಿಮ್ಮನ್ನು ನಿಲ್ಲಿಸಿ ದೇವರ ಹೆಸರಲ್ಲಿ ಪ್ರಮಾಣ ಮಾಡಿಸುತ್ತೇವೆ” ಎಂದಿದ್ದಾರೆ.
“ರಾಜ್ಯದ ಯಾವುದಾರರು ಶಾಸಕನ ಮೇಲೆ ಅತೀ ಹೆಚ್ಚು ಕೇಸ್ ದಾಖಲಾಗಿದ್ದರೆ ಅದು ಹರೀಶ್ ಪೂಂಜರ ಮೇಲೆ. ಮುಂದೆ ಅವರ ಹೆಸರಲ್ಲಿ ರೌಡಿ ಶೀಟರ್ ಕೇಸ್ ಕೂಡ ಓಪನ್ ಆಗುವ ಸಾಧ್ಯತೆ ಇದೆ. ಮೊಗ್ರು, ಬಂದಾರಿನಲ್ಲಿ ನಡೆದಿರುವ 700 ಕೋಟಿ ರೂ. ಹಗರಣವನ್ನೂ ಸಾರ್ವಜನಿಕರ ಮುಂದೆ ಇಡುತ್ತೇವೆ . ಬಿಜೆಪಿಯ ಸಂಸದ ವಿಜಯೇಂದ್ರ ಅವರು ರಾಜ್ಯದ ದೊಡ್ಡ ಕಳ್ಳ. ಕಾಂಗ್ರೆಸ್ ಪಕ್ಷದ ಭಿಕ್ಷೆಯಿಂದ ಅವರು ಶಾಸಕರಾಗಿದ್ದಾರೆ. ಬಿಜೆಪಿ ಅಂದ್ರೆ ‘ಭಿಕ್ಷುಕರ ಜನತಾ ಪಾರ್ಟಿ’ ಎಂದು ಕಿಡಿ ಕಾರಿದರು.
ಬೆಳ್ತಂಗಡಿ ನಗರಕ್ಕೆ ಬೈಪಾಸ್ ಮಾಡಿ ನಗರ ಅಭಿವೃದ್ಧಿ ಮಾಡಬೇಕು ಎಂದು ಆಗ್ರಹಿಸಿರುವ ಅವರು “ತಾಲೂಕಿನಲ್ಲಿ ಹೆದ್ದಾರಿಯ ಕೆಲಸ ಮಾಡಲು ನಿಮ್ಮಿಂದ ಸಾಧ್ಯವಾಗದಿದ್ದರೆ ನಾವು ಮಾಡುತ್ತೇವೆ. ಮರುಚುನಾವಣೆ ಘೋಷಣೆ ಮಾಡಿ, ನೀವು ನಿಮ್ಮ ಶಕ್ತಿ ತೋರಿಸಿ ಎಂದು ಸವಾಲು” ಹಾಕಿದ್ದಾರೆ.