ಸಾಂದರ್ಭಿಕ ಚಿತ್ರ
ಮಂಗಳೂರು: ಅರಣ್ಯ ಭೂಮಿ ಒತ್ತುವರಿಗೆ ಸಂಬಂಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಮಂಗಳೂರಿನಲ್ಲೂ ಚುರುಕುಗೊಂಡಿದ್ದು ಮಂಗಳೂರು ಅರಣ್ಯ ವೃತ್ತದ ಕುದುರೆಮುಖ ಗಡಿ ಭಾಗದಲ್ಲೊಂದು ರೆಸಾರ್ಟ್ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅರಣ್ಯ ವೃತ್ತದ ಮಂಗಳೂರು, ಕುಂದಾಪುರ ಹಾಗೂ ಕಾರ್ಕಳ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 3,912 ಪ್ರಕರಣಗಳಲ್ಲಿ 5,966.390ಎಕರೆ ಭೂಮಿ ಒತ್ತುವರಿಯಾಗಿರುವುದು ಕಂಡುಬಂದಿದೆ. ಕುದುರೆಮುಖದ ಕಳಸ ತಾಲೂಕಿನ ಗಡಿ ಪ್ರದೇಶದಲ್ಲಿ ರೆಸಾರ್ಟ್ ವೊಂದು ಕಾರ್ಯನಿರ್ವಹಿಸುತ್ತಿರುವುದು ಕಾರ್ಯಪಡೆಯ ಗಮನಕ್ಕೆ ಬಂದಿದ್ದು ಇದು ಹಳೆ ಅರಣ್ಯ ಕಾಯ್ದೆಯನ್ವಯ ಸ್ವಂತಕ್ಕೆ ಅನುಮತಿ ಪಡೆದಿದ್ದು, ಕಂದಾಯ ಹಾಗೂ ಪ್ರವಾಸೋದ್ಯಮ ಇಲಾಖೆಯ ಅನುಮತಿಯೊಂದಿಗೆ ಕಳೆದ 5 ವರ್ಷಗಳಿಂದ ಹೋಮ್ ಸ್ಟೇ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಇದು ತಾತ್ಕಾಲಿಕ ಪರವಾನಿಗೆಯಾಗಿರುವುದರಿಂದ ಈ ಬಗ್ಗೆ ಕಂದಾಯ, ಅರಣ್ಯ ಇಲಾಖೆಯ ಜಂಟಿ ಸರ್ವೇ ಬಳಿಕ ಈ ರೆಸಾರ್ಟ್ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಮಾಹಿತಿ ಪ್ರಕಾರ ಕಾರ್ಕಳ ವಿಭಾಗದಲ್ಲಿ ಒಟ್ಟು 163 ಕೇಸ್‌ಗಳಲ್ಲಿ 381.21 ಎಕರೆ ಒತ್ತುವರಿ ವರದಿಯಾಗಿದೆ.
10ರಿಂದ 30 ಎಕರೆಯ ಒಂದು ಪ್ರಕರಣದಲ್ಲಿ 18 ಎಕರೆ ಒತ್ತುವರಿಯಾಗಿದೆ.
3ರಿಂದ 10 ಎಕರೆಯ 31 ಪ್ರಕರಣಗಳಲ್ಲಿ 135.69 ಎಕರೆ ಒತ್ತುವರಿಯಾಗಿದೆ.
3 ಎಕರೆಯೊಳಗಿನ 131 ಪ್ರಕರಣಗಳಲ್ಲಿ 227.53 ಎಕರೆ ಒತ್ತುವರಿ ದಾಖಲಾಗಿದೆ.
ಮಂಗಳೂರು ಅರಣ್ಯ ವೃತ್ತದ ಮಂಗಳೂರು ವಿಭಾಗದಲ್ಲಿ
ಒಟ್ಟು 2,591 ಪ್ರಕರಣಗಳಲ್ಲಿ 4,060.85 ಎಕರೆ ಒತ್ತುವರಿ ಪತ್ತೆಯಾಗಿದೆ.
10ರಿಂದ 30 ಎಕರೆವರೆಗೆ 4 ಪ್ರಕರಣಗಳಲ್ಲಿ 63.50ಎಕರೆ ಒತ್ತುವರಿಯಾಗಿದೆ.
3ರಿಂದ 10 ಎಕರೆಯಲ್ಲಿನ 11 ಪ್ರಕರಣಗಳಲ್ಲಿ 70.29 ಎಕರೆ ಒತ್ತುವರಿ ಪತ್ತೆಯಾಗಿದೆ.
3 ಎಕರೆಯೊಳಗಿನ 2,576 ಕೇಸ್ ಗಳಲ್ಲಿ 3,927.07 ಎಕರೆ ಒತ್ತುವರಿಯಾಗಿದೆ.
ಕುದುರೆಮುಖ ವಿಭಾಗದಲ್ಲಿ ಒಟ್ಟು 1,158 ಪ್ರಕರಣಗಳಲ್ಲಿ 1,524.32 ಎಕರೆ ಒತ್ತುವರಿಯಾಗಿದೆ.
10ರಿಂದ 30 ಎಕರೆಯಲ್ಲಿ ಯಾವುದೇ ಪ್ರಕರಣಗಳಿಲ್ಲ, ಆದರೆ
3ರಿಂದ 10 ಎಕರೆಯಲ್ಲಿ 50 ಪ್ರಕರಣಗಳಲ್ಲಿ, 285.28 ಎಕರೆ ಒತ್ತುವರಿಯಾಗಿದೆ.
3 ಎಕರೆಯೊಳಗಿನ 1,108 ಪ್ರಕರಣಗಳಲ್ಲಿ 1,239.042 ಎಕರೆ ಒತ್ತುವರಿ ಕಂಡುಬಂದಿದೆ.
ಕೇರಳದ ವಯನಾಡ್ ದುರಂತದ ಬೆನ್ನಲ್ಲೆ ಕರ್ನಾಟಕ ರಾಜ್ಯದ ಅರಣ್ಯ ಪ್ರದೇಶಗಳಲ್ಲಿಯೂ ಅನಧಿಕೃತ ರೆಸಾರ್ಟ್, ಹೋಂ ಸ್ಟೇ ಹಾಗೂ ಅರಣ್ಯ ಭೂಮಿ ಒತ್ತುವರಿ ಬಗ್ಗೆ ಕ್ರಮ ಕೈಗೊಂಡು ಒಂದು ತಿಂಗಳೊಳಗೆ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದರ ಪರಿಣಾಮ ನಿಯಮಾನುಸಾರ ಕ್ರಮದ ಮೂಲಕ ಅಧಿಕಾರಿಗಳಿಂದ ಕಾರ್ಯಾಚರಣೆ ಆರಂಭವಾಗಿದೆ.
3 ಎಕರೆಗಿಂತ ಕಡಿಮೆ ಜಾಗವನ್ನು ಒತ್ತುವರಿ ಮಾಡಿರುವವರಿಗೆ ಸದ್ಯದ ಮಟ್ಟಿಗೆ ತೊಂದರೆ ಇಲ್ಲದಿದ್ದರೂ ಸೂಕ್ತ ದಾಖಲೆ ಪತ್ರಗಳುಅಗತ್ಯವಾಗಿದೆ. ಅರಣ್ಯ ಸಂರಕ್ಷಣಾ ಕಾಯ್ದೆ 64(ಎ) ಪ್ರಕಾರ ಈಗಾಗಲೇ ನೋಟಿಸ್ ಪಡೆದುಕೊಂಡ ಒತ್ತುವರಿದಾರರು ಇಲಾಖಾ ಅಧಿಕಾರಿಗಳ ನ್ಯಾಯಿಕ ಅದಾಲತ್‌ನಲ್ಲಿ ತಮ್ಮ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಈ ಪ್ರಕರಣಗಳಲ್ಲೂ ತೆರವು ಕಾರ್ಯಾಚರಣೆ ಎದುರಿಸಬೇಕಾಗುತ್ತದೆ.
ಸದ್ಯ ಈ ತೆರವು ಕಾರ್ಯಾಚರಣೆಗೆ ಕಾಡಿನಂಚಿನಲ್ಲಿರುವ ಜನ ವಿರೋಧ ವ್ಯಕ್ತಪಡಿಸಿದ್ದು, ಇವರಿಗೆ ತೊಂದರೆಯಾಗದಂತೆ ಒತ್ತುವರಿ ನಡೆಸಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.