ಬೆಳ್ತಂಗಡಿ : ಬಿಜೆಪಿ ದೇಶದಲ್ಲಿ ದ್ವೇಷದ ರಾಜಕಾರಣವನ್ನು ಮಾಡುತ್ತಿದೆ. ರಾಜ್ಯಪಾಲರು ಬಿಜೆಪಿ ಏಜೆಂಟ್ ಆಗಿ ವರ್ತಿಸಿದ್ದೇ ಆದರೆ ಕಾರ್ಯಕರ್ತರು ಯಾವ ತ್ಯಾಗಕ್ಕೂ ಸಿದ್ದರಾಗಿರಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.ಅವರು ಭಾನುವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
‘ರಾಜ್ಯದ ಸಿದ್ದರಾಮಯ್ಯ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಕಂಗೆಟ್ಟು ಹೋಗಿದೆ. ಬಡವರ ಪರವಾಗಿ ಕೆಲಸ ಮಾಡುವವರನ್ನು ಬಿಜೆಪಿಯವರು ಒಪ್ಪುವುದಿಲ್ಲ. ಹಾಗಾಗಿ ಸಿದ್ದರಾಮಯ್ಯರನ್ನು ಅಧಿಕಾರದಿಂದ ಇಳಿಸಬೇಕು ಎಂದು ಬಿಜೆಪಿಗರು ಕುತಂತ್ರ ಮಾಡುತ್ತಿದ್ದಾರೆ. ಈಗಾಗಲೇ ನಡೆದ ಲೋಕಸಭಾ ಚುನಾವಣೆಯಲ್ಲಿ ಜನ ಮೋದಿಯನ್ನು ತಿರಸ್ಕರಿಸಿದ್ದು ಸ್ಪಷ್ಟವಾಗಿದ್ದು ಮುಂದಿನ ದಿನಗಳಲ್ಲಿ ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದರು.‘ನಾಯಕರಾದವರು, ಕಾರ್ಯಕರ್ತರಾದವರು ನಾನು ಮಾಡುವ ಕೆಲಸ ನನ್ನ ಸ್ವಂತಕ್ಕಾಗಿ ಅಲ್ಲ ಪಕ್ಷಕ್ಕಾಗಿ ಎಂಬ ಭಾವನೆ ಇರಬೇಕು. ಕಷ್ಟದ ಮಧ್ಯೆಯೂ ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಎದ್ದು ನಿಲ್ಲಲು ರಾಹುಲ್ ಗಾಂಧಿಯಲ್ಲಿರುವ ಹೃದಯವಂತಿಕೆ ಕಾರಣವಾಗಿದೆ. ಎಲ್ಲರೂ ಅಂತಹ ಹೃದಯವಂತಿಕೆ, ಪ್ರೀತಿಯನ್ನು ಬೆಳಸಿಕೊಳ್ಳಬೇಕು. ಪಕ್ಷದಲ್ಲಿ ನಿಷ್ಠಾವಂತರಾದಾಗ ಪಕ್ಷ ಗುರುತಿಸುತ್ತದೆ ಎಂಬುದಕ್ಕೆ ನನಗೆ ನೀಡಿದ ಅನೇಕ ಜವಾಬ್ದಾರಿಗಳೇ ಸಾಕ್ಷಿ’ ಎಂದರು.‘ಗೂಂಡಾಗಿರಿ ಮಾಡಲು, ಪೊಲೀಸರು, ಅರಣ್ಯ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಲು ಶಾಸಕರಾಗುವುದಲ್ಲ. ಜಾತಿ ಧರ್ಮದ ಹೆಸರಿನಲ್ಲಿ ಸಮಾಜ ವಿಘಟನೆ ಮಾಡುವುದು ಅವರ ಕೆಲಸವಾಗಬಾರದು. ಅವರ ಕೆಲಸ ಶಾಸನ ಸಭೆಯಲ್ಲಿ ಜನರಿಗೆ ಅನುಕೂಲವಾಗುವ ಶಾಸನ ರೂಪಿಸುವುದು. ಎಲ್ಲರನ್ನೂ ಪ್ರೀತಿಸಿ ಜನಪರವಾಗಿ ನಿಲ್ಲುವುದಾಗಿದೆ’ ಎಂದು ಅವರು ಹೇಳಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ದುಡಿಯುವ ವರ್ಗ, ಶ್ರಮಿಕ ವರ್ಗದೊಂದಿಗೆ ಗಟ್ಟಿಯಾಗಿ ನಿಂತವರು ಐವನ್ ಡಿಸೋಜಾರು. ಅವರು ಎಂ.ಎಲ್.ಸಿ ಆಗಿದ್ದು ಕಾರ್ಯಕ್ಷಮತೆ ಮತ್ತು ಬದ್ಧತೆ ಕಾರ್ಯದಿಂದಾಗಿಯೇ ಹೊರತು ಸೂಟ್ ಕೇಸ್ ನೀಡಿ ಅಲ್ಲ. ಪಕ್ಷದ ಕೆಲಸವನ್ನು, ಜನರ ಕೆಲಸವನ್ನು ತನ್ನ ಮನೆಯ ಕೆಲಸದಂತೆ ಮಾಡುವ ವಿಶೇಷ ರಾಜಕಾರಣಿ ಅವರು’ ಎಂದರು.ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಅಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಆ ವಿಚಾರದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ತಾಲ್ಲೂಕಿಗೆ ಮಳೆ ಹಾನಿಗೆ ಸಂಬಂಧಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಸುವಲ್ಲಿ ಅವಿರತ ಶ್ರಮವಿರಲಿ ಎಂದು ವಿನಂತಿಸಿದರು.ಮಳೆ ಬಂದು ವ್ಯಾಪಕ ಹಾನಿಯಾದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಕ್ಷೇತ್ರದ ಶಾಸಕರು ಇಂದು ಸಂಸದರೊಂದಿಗೆ ಮತ್ತೆ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಳ್ತಂಗಡಿ ನೂತನ ಪ್ರವಾಸಿ ಬಂಗಲೆ ನಿರ್ಮಾಣದಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದ್ದು, ಇದೀಗ ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯಲ್ಲಿ ಭ್ರಷ್ಟಾಚಾರದ ವಾಸನೆ ಕೇಳಿಬರುತ್ತಿದೆ. ಹೆದ್ದಾರಿ ನಿರ್ಮಾಣದಲ್ಲಿ 20 ಕೋಟಿಯ ಕೆಲಸವಾಗದೆ 120 ಕೋಟಿಯಷ್ಟು ಬಿಲ್ ಪಾವತಿಯಾದ ವಿಚಾರವಿದೆ. ಇದೀಗ ಕದ್ದು ಮುಚ್ಚಿ ತರಾತುರಿಯಲ್ಲಿ ಮುಗೇರೋಡಿ ಕನ್‍ಸ್ಟ್ರಕ್ಷನ್ ಅವರಿಗೆ ರಸ್ತೆ ಕಾಮಗಾರಿ ಆರಂಭಿಸಲು ಶಾಸಕ ಸಂಸದರು ಸೇರಿಕೊಂಡು ಚಾಲನೆ ನೀಡಿದ್ದಾರೆ’ ಎಂದು ಆರೋಪಿಸಿದರು.
ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್‍ನ ಎಸ್.ಸಿ ಘಟಕದ ಅಧ್ಯಕ್ಷ ಶೇಖರ ಕುಕ್ಕೇಡಿ, ರಾಷ್ಟ್ರೀಯ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜಾ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಧರಣೇಂದ್ರ ಕುಮಾರ್, ನಮಿತಾ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜನ್ ಜಿ ಗೌಡ, ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾಯದರ್ಶಿ ಪ್ರವೀಣ್ ಪೆರ್ನಾಂಡೀಸ್, ಜಿಲ್ಲಾ ಪಂಚಾಯಿತಿ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಜಿಲ್ಲಾ ಕಾರ್ಮಿಕ ಘಟಕದ ಅಬ್ದುಲ್ ರಹಿಮಾನ್ ಪಡ್ಪು, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಅಬ್ದುಲ್ ಕರೀಂ ಗೇರುಕಟ್ಟೆ, ಕಾಂಗ್ರೆಸ್ ತಾಲ್ಲೂಕು ಎಸ್.ಸಿ.ಘಟಕದ ಅಧ್ಯಕ್ಷ ಓಬಯ್ಯ, ಮಹಿಳಾ ಘಟಕದ ಅಧ್ಯಕ್ಷೆ ವಂದನಾ ಭಂಡಾರಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜೈಸನ್ ಪಟ್ಟೇರಿ, ಸೇವಾದಳದ ಕೆ.ಸಿ.ಪ್ರದೀಪ್, ಮುಖಂಡರುಗಳಾದ ಲೋಕೇಶ್ವರಿ ವಿನಯಚಂದ್ರ, ಪ್ರಶಾಂತ್ ವೇಗಸ್, ಎನ್.ಎಸ್.ಯು.ಐ ನ ತಾಲ್ಲೂಕು ಅಧ್ಯಕ್ಷ ದೀವಿತ್ ದೇವಾಡಿಗ ಇದ್ದರು.ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಸ್ವಾಗತಿಸಿದರು. ನಗರ ಘಟಕದ ಅಧ್ಯಕ್ಷ ಸತೀಶ್ ಕಾಶಿಪಟ್ಣ ವಂದಿಸಿದರು. ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ನಿರೂಪಿಸಿದರು.