ಮಂಗಳೂರು: ಭಾರೀ ಮಳೆಗೆ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ನೂರಾರು ಜನರ ಸಾವಿಗೆ ಕಾರಣವಾಗಿದೆ. ಆದರೆ ಅಂಥದ್ದೇ ಭಯಾನಕ ಘಟನೆ ಇದೀಗ ಮಂಗಳೂರಿನ ಬಳಿಯೂ ಸಂಭವಿಸುವ ಆತಂಕ ಎದುರಾಗಿದೆ.
ನಗರದ ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ ಗುಡ್ಡದ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಗುಡ್ಡ ಅಗೆತ ಮಾಡಿರುವ ಕಾರಣ ಇದೀಗ ಗುಡ್ಡದ ಮಣ್ಣು ಕುಸಿಯುತ್ತಿದೆ. ಮಳೆಗೆ ಗುಡ್ಡ ಕುಸಿಯುತ್ತಲೇ ಇದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ. ಕೆತ್ತಿಕಲ್ ಗುಡ್ಡದ ಬಳಿ ಇರುವ 12 ಮನೆಗಳಿಗೆ ನೋಟಿಸ್ ನೀಡಲಾಗಿದೆ. ಸದ್ಯ ಆ ಸ್ಥಳ ಭಯಾನಕವಾಗಿದೆ.
ಕೆತ್ತಿಕಲ್ ಗುಡ್ಡದ ಮೇಲ್ಭಾಗದಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, ಒಂದು ವೇಳೆ ಇಡೀ ಗುಡ್ಡವೇನಾದರೂ ಕುಸಿದುಹೋದಲ್ಲಿ ಕೇರಳದ ವಯನಾಡು ದುರಂತದAತೆ ಇಲ್ಲಿಯೂ ಸಂಭವಿಸುವ ಸಾಧ್ಯತೆ ಇದೆ. ಈಗಾಗಲೆ ನೋಟಿಸ್ ನೀಡಿರುವ ಮನೆಗಳ ಕುಟುಂಬಸ್ಥರು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ.
ಅವೈಜ್ಞಾನಿಕ ಕಾಮಗಾರಿ: ಜನರಿಗೆ ಸಂಕಷ್ಟ
ಅನೇಕ ವರ್ಷಗಳಿಂದ ಇಲ್ಲಿ ಮನೆ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಜನ ಅವೈಜ್ಞಾನಿಕ ಕಾಮಗಾರಿಯ ಕಾರಣಕ್ಕೆ ಈಗ ನೆಮ್ಮದಿಯನ್ನೇ ಕಳೆದುಕೊಳ್ಳುವಂತಾಗಿದೆ. ಎರಡು ತಿಂಗಳ ಹಿಂದಷ್ಟೇ ಖರೀದಿ ಮಾಡಿದ್ದ ಮನೆಯನ್ನು ಖಾಲಿ ಮಾಡುವ ಸ್ಥಿತಿ ಕೆತ್ತಿಕಲ್ ಗುಡ್ಡ ಸಮೀಪದ ಉಷಾ ಎಂಬವರದ್ದಾಗಿದೆ. ಗುಡ್ಡ ಅಗೆಯುವ ಸಂದರ್ಭ ಅಪಾಯದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತದರೂ ಆ ಬಗ್ಗೆ ಅಧಿಕಾರಿಗಳು ಮೌನವಹಿಸಿದ್ದರು. ಇದೀಗ ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿದು ಭಾರೀ ಭಯದ ವಾತಾವರಣ ನಿರ್ಮಾಣವಾಗಿದೆ.
ಜಾಹೀರಾತು