ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ದರ್ಶನ್ ಅಪರಾಧಿ ಅಲ್ಲದಿದ್ರೂ ಅವರ ಮೇಲೆ ಗಂಭೀರ ಆರೋಪವಿದೆ. ಮೃತ ರೇಣುಕಾಸ್ವಾಮಿ ಅವರು ನಟಿ ಪವಿತ್ರಾರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದನ್ನು ನಂಬುತ್ತೇವೆ. ನಮ್ಮಲ್ಲಿ ಸ್ಟಾರ್ ಸಂಸ್ಕೃತಿ ಅನ್ನೋದು ಅಳಿಸಬೇಕು. ಇನ್ನೂ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾತ್ರ ಚಿತ್ರರಂಗ ಮಾತನಾಡೋದಲ್ಲ, ಇಂತಹ ಸಮಸ್ಯೆ ಎದುರಾದಾಗ ಅವರು ಮೌನ ವಹಿಸುತ್ತಾರೆ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು ತಮ್ಮ ಜೈಲು ಅನುಭವವನ್ನು ಹಂಚಿಕೊಂಡು ‘ಜೈಲಿನ ಸ್ಥಿತಿಗತಿ ತುಂಬಾನೇ ಕೆಟ್ಟ ಅನುಭವ ಎಂದು ತಿಳಿಸಿದ್ದಾರೆ. ಜೊತೆಗೆ ಅಭಿಮಾನಿಯೋರ್ವ ಮಾತು ಕೇಳಿ ಶಾಕ್ ಆಗಿದ್ದಾರಂತೆ.
2022ರಲ್ಲಿ, ನಟ ಚೇತನ್ ಅಹಿಂಸಾ ಜೈಲಿನಲ್ಲಿದ್ದಾಗ ಅಭಿಮಾನಿಯೋರ್ವ ಸಿಕ್ಕಿದ್ದನಂತೆ. ಆತ ‘ನಾನು ನಿಮ್ಮ ‘ಮೈನಾ’ ಸಿನಿಮಾ ನೋಡಿ ಲವ್ ಮಾಡಿದೆ, ನಂತರ ಕೊಲೆ ಮಾಡಿ ಜೈಲಿಗೆ ಬಂದಿದ್ದೇನೆ’ ಎಂದಿದ್ದಾನಂತೆ.
ಸಿನಿಮಾ ಜನರ ಮೇಲೆ ಎಷ್ಟೊಂದು ಪರಿಣಾಮ ಬೀರುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ತಿಳಿಸಿರುವ ಅವರು ನಮ್ಮ ಚಿತ್ರರಂಗದಲ್ಲಿ ಸಿನಿಮಾ ಓಡೋದು ಸ್ಟಾರ್ ಕಲ್ಚರ್‌ನಿಂದ ಅಲ್ಲ. ಕಥೆ ಚೆನ್ನಾಗಿದ್ದು, ಸಂದೇಶ ಇದ್ರೆ ಸಿನಿಮಾಗಳು ಓಡುತ್ತವೆ ಎಂದಿದ್ದಾರೆ.