ಎರಡು ಅಂತಸ್ತಿನ ಶಾಲಾ ಕಟ್ಟಡ ಕುಸಿತ: ಅವಶೇಷಗಳ ಅಡಿ ಸಿಲುಕಿದ 154 ಮಕ್ಕಳು: 22 ವಿದ್ಯಾರ್ಥಿಗಳು ಸಾವು..!

ಅಬುಜಾ: ಎರಡು ಅಂತಸ್ತಿನ ಶಾಲಾ ಕಟ್ಟಡ ಕುಸಿದು 22 ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಜು.12ರಂದು ಉತ್ತರ – ಮಧ್ಯ ನೈಜೀರಿಯಾದಲ್ಲಿ ಸಂಭವಿಸಿದೆ.

ರಾಜ್ಯದ ಬುಸಾ ಬುಜಿ ಸಮುದಾಯದಲ್ಲಿರುವ ಸೇಂಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ತರಗತಿಗಳಿಗೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಈ ಕಟ್ಟಡ ಕುಸಿತ ಕಂಡಿದೆ. ಒಟ್ಟು 154 ವಿದ್ಯಾರ್ಥಿಗಳು ಶಾಲಾ ಕಟ್ಟಡದ ಅವಶೇಷಗಳ ಅಡಿ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ 132 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪ್ರಸ್ಥಭೂಮಿ ಪೊಲೀಸ್ ವಕ್ತಾರ ಆಲ್ಫ್ರೆಡ್ ಅಲಾಬೊ ತಿಳಿಸಿದ್ದಾರೆ. 22 ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ.

ಕಳಪೆ ಕಾಮಗಾರಿ ಮತ್ತು ನದಿ ದಡದ ಬಳಿ ಇರುವ ಸ್ಥಳದಿಂದಾಗಿ ದುರಂತ ಸಂಭವಿಸಿದೆ ಎಂದು ಅಲ್ಲಿನ ಪ್ರಾದೇಶಿಕ ಸರ್ಕಾರ ಹೇಳಿದೆ. ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಶಾಲೆಗಳನ್ನು ಮುಚ್ಚುವಂತೆ ಇದೇ ವೇಳೆ ಸೂಚನೆ ಕೂಡಾ ನೀಡಿದೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಹತ್ತಾರು ಗ್ರಾಮಸ್ಥರು ಶಾಲೆಯ ಬಳಿ ಜಮಾಯಿಸಿದರು. ಮಕ್ಕಳನ್ನು ಕಳೆದುಕೊಂಡ ಪೋಷಕರು ದುಃಖದಲ್ಲಿದ್ದರೆ, ಕೆಲವರ ಆಕ್ರಂದನ ಮುಗಿಲು ಮುಟ್ಟಿತ್ತು. ಕೆಲವರು ಕಟ್ಟಡದ ಅವಶೇಷಗಳಡಿ ಸಿಲುಕಿ ಬದುಕುಳಿದವರ ನೆರವಿಗೆ ಮುಂದಾದರು.

error: Content is protected !!