ಜು.13 ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ನೂತನ ಕೇಂದ್ರ ಕಚೇರಿ ಕಟ್ಟಡ ‘ಶ್ರೀಗುರುಸಾನಿಧ್ಯ’ ಉದ್ಘಾಟನೆ

ಬೆಳ್ತಂಗಡಿ: ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ನೂತನ ಕೇಂದ್ರ ಕಚೇರಿ ಕಟ್ಟಡ ‘ಶ್ರೀಗುರುಸಾನಿಧ್ಯ’ ಜು. 13 ಶನಿವಾರ ಉದ್ಘಾಟನೆಗೊಳ್ಳಲಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಉಪಾಧ್ಯಕ್ಷ ಭಗೀರಥ ಜಿ. ಅವರು 5.25 ಕೋಟಿ ರೂ ವೆಚ್ಚದಲ್ಲಿ 11,100 ಚದರ ಅಡಿ ವಿಸ್ತೀರ್ಣದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದೆ. ಜು. 13 ಬೆಳಿಗ್ಗೆ 10.30ಕ್ಕೆ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಕಟ್ಟಡ ಉದ್ಘಾಟಿಸಲಿದ್ದಾರೆ. ಸೋಲೂರು ಆರ್ಯ ಈಡಿಗ ಸಂಸ್ಥಾನದ ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಆಡಳಿತ ಕಚೇರಿ, ಸಚಿವ ದಿನೇಶ್ ಗುಂಡೂರಾವ್ ಭದ್ರತಾ ಕೊಠಡಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಸಭಾ ಭವನ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಹರೀಶ್ ಪೂಂಜ ಮತ್ತು ಉಮಾನಾಥ ಕೋಟ್ಯಾನ್ ‘ಸಹಕಾರಿ ಆ್ಯಪ್’ ಬಿಡುಗಡೆ ಮಾಡಲಿದ್ದಾರೆ ಎಂದರು.

ಸಂಘವು  22 ಶಾಖೆಗಳನ್ನು ಹೊಂದಿದ್ದು, 2024-25ನೇ ಸಾಲಿನಲ್ಲಿ ಹೊಸದಾಗಿ 3 ಶಾಖೆಗಳು ಲೋಕಾರ್ಪಣೆಗೊಳ್ಳಲಿವೆ. ಸಂಘದ ಹೆಸರಿನಲ್ಲಿ ಐಎಪ್ಎಸ್ ಸಿ  ಕೋಡ್ ಹೊಂದಿದ್ದು, ಮುಂದಿನ ದಿನಗಳಲ್ಲಿ ಕ್ಯೂಆರ್ ಕೋಡ್, ನ್ಯಾಚ್, ಇ-ಕಲೆಕ್ಷನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು. ಸಂಘವು ಕಳೆದ ಸಾಲಿನಲ್ಲಿ ₹1,120 ಕೋಟಿ ವಹಿವಾಟು ನಡೆಸಿದ್ದು, ₹3.84 ಕೋಟಿ ನಿವ್ವಳ ಲಾಭಗಳಿಸಿದೆ ಎಂದರು.

ಸಂಘವು ದತ್ತು ಸ್ವೀಕಾರ ಕಾರ್ಯಕ್ರಮದಡಿ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ವೆಚ್ಚ ಭರಿಸುತ್ತಿದೆ. 111 ಪದವಿ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಪ್ರತಿ ವರ್ಷ 6 ರಿಂದ 7 ಲಕ್ಷ ರೂ. ಮೊತ್ತದ ನೆರವು ನೀಡುತ್ತಿದೆ. ಸಂಘವು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ ಸತತ 8 ವರ್ಷಗಳಿಂದ ಸಾಧನಾ ಪ್ರಶಸ್ತಿ ಪಡೆಯುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ, ನಿರ್ದೇಶಕ ಸುಜಿತಾ ವಿ. ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ ಗುರುಕೃಪಾ, ಕೆ.ಪಿ.ದಿವಾಕರ, ಜಗದೀಶ್ಚಂದ್ರ ಡಿ.ಕೆ, ಚಂದ್ರಶೇಖರ, ಧರಣೇಂದ್ರ ಕುಮಾರ್ ಪಿ, ಗಂಗಾಧರ ಮಿತ್ತಮಾರು, ಆನಂದ ಪೂಜಾರಿ ಸರ್ವೆದೋಳ, ರಾಜಾರಾಮ ಕೆ.ಬಿ, ಜಯ ವಿಕ್ರಮ ಪಿ, ಸಂಘದ ವಿಶೇಷಾಧಿಕಾರಿ ಎಂ. ಮೋನಪ್ಪ ಪೂಜಾರಿ ಕಂಡೆತ್ಯಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಉಪಸ್ಥಿತರಿದ್ದರು.

error: Content is protected !!