ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದ ಪುರಾತನ ಅಶ್ವತ್ಥ ಮರ ಜುಲೈ 07ರಂದು ಉರುಳಿ ಬಿದ್ದಿದೆ.
ಕಲ್ಮಂಜ ಗ್ರಾಮದ ಪಜಿರಡ್ಕದಲ್ಲಿ ಪವಿತ್ರ ನೇತ್ರಾವತಿ ಮತ್ತು ಮೃತ್ಯುಂಜಯ ನದಿಯ ಸಂಗಮ ಸ್ಥಳದಲ್ಲಿ ಸುಮಾರು 800 ವರ್ಷಗಳ ಹಿಂದೆ ನಿರ್ಮಾಣಗೊಂಡ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕವು ನಂಬಿ ಬಂದ ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಪವಿತ್ರ ಶಿವ ಸಾನಿಧ್ಯವಾಗಿ ಪ್ರಸಿದ್ಧಿಯನ್ನು ಪಡೆದಿದೆ.
ಈ ದೇವಸ್ಥಾನವು ಪವಿತ್ರ ನೇತ್ರಾವತಿ ನದಿಯ ದಡದಲ್ಲಿದ್ದು, ಆಟಿ ಅಮಾವಾಸ್ಯೆ ಸೇರಿದಂತೆ
ತೀರ್ಥ ಸ್ನಾನಕ್ಕೆ ಅತ್ಯಂತ ಸೂಕ್ತ ಸ್ಥಳವಾಗಿದ್ದು, ಪ್ರತಿವರ್ಷ ಈ ಕ್ಷೇತ್ರಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ದರ್ಶನವನ್ನು ಪಡೆಯುತ್ತಾರೆ.
ಈ ದೇವಳದ ಮುಂಬಾಗದಲ್ಲಿ ಹರಿಯುವ ನದಿಯ ದಡದಲ್ಲಿ ನೂರಾರು ವರ್ಷ ಪುರಾತನವಾದ ಅಶ್ವತ್ಥ ವೃಕ್ಷವು ಇದ್ದು, ಈ ವೃಕ್ಷವು ಕೂಡಾ ಪ್ರಕೃತಿ ಪೂಜಕರಾದ ಹಿಂದೂಗಳಿಗೆ ಅತ್ಯಂತ ಶ್ರದ್ಧೆಯ ಕೇಂದ್ರವಾಗಿತ್ತು, ದೇವಳಕ್ಕೆ ಬಂದ ಭಕ್ತಾದಿಗಳು ಈ ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಬಂದೇ ತೆರಳುತ್ತಿದ್ದರು. ಆದರೆ ಇದೀಗ ನಿರಂತರ ಸುರಿಯುತ್ತಿರುವ ಮಳೆಯ ಪರಿಣಾಮ ಮಣ್ಣು ಸಡಿಲಗೊಂಡು ಬೃಹದಾಕಾರವಾಗಿ ಬೆಳೆದು ನಿಂತಿದ್ದ ವೃಕ್ಷವು ಕಟ್ಟೆ ಸಹಿತ ಉರುಳಿಬಿದ್ದಿದೆ.ಮಳೆಗೆ ಮರ ಉರುಳಿ ಬಿದಿದ್ದರೂ ಭಕ್ತರಲ್ಲಿ ಮಾತ್ರ ಮುಂದೆ ಏನಾದರೂ ಪ್ರಕೃತಿ ವಿಕೋಪದಂತಹ ಅನಾಹುತ ಸಂಭವಿಸಬಹುದೋ ಎಂಬ ಆತಂಕ, ಪ್ರಾರಂಭವಾಗಿದೆ.