ಚಿಕ್ಕಮಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾತ್ರಿ, ಹಗಲು ಧಾರಾಕಾರ ಮಳೆ ಸುರಿಯುತ್ತಿದ್ದು ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ಅತೀ ಹೆಚ್ಚು ಮಳೆ ದಾಖಲು ಆರಂಭವಾಗಿದೆ.
ಕಳೆದ ಒಂದೇ ದಿನದಲ್ಲಿ 98.0 ಮಿಲಿ ಮೀಟರ್ ದಾಖಲೆಯ ಮಳೆ ಸುರಿದಿದ್ದು, 4 ಇಂಚು ಮಳೆಗೆ ಕೊಟ್ಟಿಗೆಹಾರ, ಚಾರ್ಮಾಡಿ ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಕೊಟ್ಟಿಗೆಹಾರ ಗ್ರಾಮ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳಲ್ಲೂ ನಿರಂತರವಾಗಿ ಮಳೆ ಸುರಿಯುತ್ತಿದೆ.
ಸದ್ಯ ಸುರಿಯುತ್ತಿರುವ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್ ಹೆದ್ದಾರಿ ಸಂಚಾರ ದುಸ್ಥರವಾಗಿದೆ. ಹೆದ್ದಾರಿ ಹಾಗೂ ತಡೆಗೋಡೆಗಳಲ್ಲಿ ಬಿರುಕು ಕಂಡುಬAದಿದ್ದು ಕುಸಿಯುವ ಭೀತಿ ಎದುರಾಗಿದೆ ಎನ್ನಲಾಗುತ್ತಿದೆ.
ಈ ಮೊದಲು ಕೋಟ್ಯಂತರ ರೂಪಾಯಿ ವ್ಯಯಿಸಿ ಹೆದ್ದಾರಿ ಕಾಮಗಾರಿ ನಡೆಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ, ಕಳಪೆ ಗುಣಮಟ್ಟದ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಕಾರಣ 100-200 ಅಡಿ ಮಣ್ಣು ತುಂಬಿಸಿ ರಸ್ತೆ ಸಿರ್ಮಿಸಿದ ಜಾಗದಲ್ಲೇ ಬಿರುಕು ಬಿಟ್ಟಿದೆ, ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ ಕಂಡು ಸ್ಥಳಿಯರಲ್ಲಿ, ಪ್ರಯಾಣಿಕರಲ್ಲಿ ಆತಂಕ ಶುರುವಾಗಿದೆ.
ಮಳೆ ಹಾಗೂ ಮಂಜಿನ ನಡುವೆ ರಸ್ತೆ ಬಿರುಕು ಬಿಟ್ಟಿರುವುದು ಕಾಣದಂತಾಗಿದ್ದು ಮತ್ತಷ್ಟು ಅಪಾಯಕಾರಿಯಾಗಿದೆ.