ಮಾಧ್ಯಮ ವರದಿಯ ಬೆನ್ನಲ್ಲೇ ಸ್ವಯಂ ದೂರು ದಾಖಲಿಸಿಕೊಂಡ ಲೋಕಾಯುಕ್ತ ಇಲಾಖೆ: ಮೂಲಾರು ಶಾಲೆಯ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

ಬೆಳ್ತಂಗಡಿ : ದ.ಕ ಜಿ.ಪಂ ಕಿರಿಯ ಪ್ರಾಥಮಿಕ ಮೂಲಾರು ಶಾಲೆ ಕುಸಿಯುವ ಭೀತಿಯಲ್ಲಿರುವ ಬಗ್ಗೆ  ಮಾಧ್ಯಮದ ವರದಿ ಬೆನ್ನಲ್ಲೇ ಲೋಕಾಯುಕ್ತ ಸ್ವಯಂಪ್ರೇರಿತ ದೂರು ದಾಖಲಿಸಿದೆ.


ಈ ಹಿನ್ನಲೆ ಶಾಲೆಯ ಸಮಸ್ಯೆಗಳ ಬಗ್ಗೆ ಮುಂಡಾಜೆ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಹಾಗೂ ಬೆಳ್ತಂಗಡಿ ತಾಲೂಕಿನ ಶಿಕ್ಷಣ ಸಂಯೋಜಕರಾದ ಚೇತನಾಕ್ಷಿ ಇವರಿಗೆ ನೋಟಿಸ್ ನೀಡಿ ಶಾಲೆಯ ಸಂದರ್ಶನ ಮಾಡಿ, ದೂರಿನ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕು ಎಂದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಹೇಗಿದೆ ಶಾಲೆಯ ಪರಿಸ್ಥಿತಿ..?

ಮುರಿದ ಸಲಾಕೆಗಳು, ನೇತಾಡಿಕೊಂಡಿರುವ ಹಂಚುಗಳು, ಬಾಯಿತೆರೆದಿರೋ ಮೇಲ್ಛಾವಣಿ, ಬಿರುಕು ಬಿಟ್ಟ ಗೋಡೆ ಇದು, ದ.ಕ ಜಿ.ಪಂ ಕಿರಿಯ ಪ್ರಾಥಮಿಕ ಮೂಲಾರು ಶಾಲೆಯ ಸ್ಥಿತಿ. 11 ಮಕ್ಕಳ ಪಾಲಿನ ವಿದ್ಯಾದೇಗುಲ ಇದಾಗಿದ್ದು ಸದ್ಯ ಈ ಶಾಲೆ 57ವರ್ಷಗಳನ್ನು ಪೂರೈಸುತ್ತಿದೆ. ಶಾಲೆ ನಿರ್ಮಿಸಿದ ಬಳಿಕ ಒಮ್ಮೆಯೂ ಇದರ ರಿಪೇರಿ ಕೆಲಸ ಆಗದ ಹಿನ್ನಲೆ ಸದ್ಯ ಕುಸಿದು ಬೀಳುವ ಅಪಾಯವಿದೆ. ತರಗತಿ ಕೋಣೆಗಳು, ಶೌಚಾಲಯದ ಮೇಲ್ಛಾವಣಿ, ಅಡುಗೆ ಕೋಣೆ ಶಿಥಿಲಾವಸ್ಥೆಗೆ ತಲುಪಿದೆ.


ಈ ಬಗ್ಗೆ ಸಂಬAದಪಟ್ಟ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮಕ್ಕಳು ಅಪಾಯಗಳ ಮಧ್ಯೆಯೇ ಪಾಠ ಕೇಳಬೇಕಿದೆ. ಸ್ವತಃ ಶಿಕ್ಷಕರೇ ಭಯಪಟ್ಟು ಪಾಠ ಮಾಡುವ ಪರಿಸ್ಥಿತಿ ಇಲ್ಲಿಯದು. ಜೋರು ಗಾಳಿ ಮಳೆ ಬಂದ್ರೆ ಸಾಕು, ಅಥವ ಬೆಳಗ್ಗೆಯೇ ಮಳೆ ಜೋರು ಇತ್ತೆಂದರೆ ಈ ಶಾಲೆಗೆ ರಜೆಯೇ ನೀಡಲಾಗುತ್ತದೆ. ಯಾಕೆಂದ್ರೆ ಮಳೆಗೆ ಈ ಶಾಲೆ ಕ್ಷಣದಲ್ಲಾದರು ಕುಸಿದು ಬೀಳ್ಬಹದು ಎಂಬ ಈ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ಜೂನ್ 12 ರಂದು ಸವಿಸ್ತಾರ ವರದಿಯನ್ನು ಪ್ರಕಟಿಸಿತ್ತು.

ಸದ್ಯ ಈ ಶಾಲೆಯ ಶೋಚನೀಯ ಸ್ಥಿಯ ಬಗ್ಗೆ ಲೋಕಾಯುಕ್ತ ಗಮನಹರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಲ್ಲದೆ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳೂ ನಿಗಾ ವಹಿಸಿರುವುದು ಸಂತಸದಾಯಕ. ಅತೀ ಶೀಘ್ರದಲ್ಲಿ ಈ ಶಾಲೆ ಅಭಿವೃದ್ಧಿಗೊಂಡು ಹಳ್ಳಿ ಮಧ್ಯೆ ಸರಕಾರಿ ಶಾಲೆ ಉಳಿಯುವಂತಾಗಲಿ.

error: Content is protected !!