ಅಳದಂಗಡಿ: 20ನೇ ವರ್ಷದ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ: ‘ಮಕ್ಕಳು ತಮ್ಮ ಜೀವನವನ್ನು ಮಹಾಗ್ರಂಥವಾಗಿಸಬೇಕು’: ನಟ ರಮೇಶ್ ಅರವಿಂದ್

ಅಳದಂಗಡಿ: ಇತಿಹಾಸ ಪ್ರಸಿದ್ಧ ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ವತಿಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ 20ನೇ ವರ್ಷದ ಉಚಿತ ಪುಸ್ತಕ ವಿತರಣೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ, ಮತ್ತು ಆರೋಗ್ಯ ಶಿಬಿರ ಕಾರ್ಯಕ್ರಮ ಜೂ 09 ಭಾನುವಾರದಂದು ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ (ರಿ.) ಇದರ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮಕ್ಕೆ ಕನ್ನಡ ಚಲನ ಚಿತ್ರ ನಟ ಹಾಗೂ ಸಿರಿ ಬ್ರಾಂಡ್ ರಾಯಭಾರಿ ರಮೇಶ್ ಅರವಿಂದ್ ಅವರು ದೀಪ ಬೆಳಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ‘ಮಕ್ಕಳು ತಮ್ಮ ಜೀವನವನ್ನು ಮಹಾಗ್ರಂಥವಾಗಿಸಬೇಕು, ಖಾಲಿ ಪುಸ್ತಕದಲ್ಲಿ ನೀವು ಯೋಚಿಸಿ ಬರೆಯುವ ಪದಗಳೇ ನಿಮ್ಮ ಜೀವನದ ಮಹಾಗ್ರಂಥಕ್ಕೆ ಕಾರಣವಾಗುತ್ತದೆ’ ಎಂದು ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೆಂದ್ರ ಹೆಗ್ಗಡೆಯವರು ಮಾತನಾಡಿ, ‘ಶಿಕ್ಷಣ ಮಹತ್ವ ತಿಳಿದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ಹಾಗು ಶಿವಪ್ರಸಾದ್ ಅವರು 20 ವರ್ಷದಿಂದ ಪುಸ್ತಕ ವಿತರಣಾ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದಾರೆ. ಮಕ್ಕಳೆಲ್ಲರೂ ಉಚಿತ ಪುಸ್ತಕದ ಪ್ರಯೋಜನವನ್ನು ಸದ್ಭಳಕೆ ಮಾಡಿಕೊಂಡು ಚೆನ್ನಾಗಿ ಓದಿ’ ಎಂದು ಕಿವಿ ಮಾತು ಹೇಳಿದರು.

ಚಿತ್ರ ನಟ ರಮೇಶ್ ಅರವಿಂದ ಅವರು ಮಕ್ಕಳಿಗೆ ಉಚಿತ ಪುಸ್ತಕ ನೀಡಿದರು. ಬಳಿಕ ಕಾರ್ಯಕ್ರಮದಲ್ಲಿ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಎಸ್ ಎಸ್ ಎಲ್ ಸಿ ಯಲ್ಲಿ  ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡ ಬೆಳ್ತಂಗಡಿ ಎಸ್.ಡಿ.ಎಂ ಪ್ರೌಢ ಶಾಲೆಯ ವಿದ್ಯಾರ್ಥಿ  ಚಿನ್ಮಯ್ ಜಿ.ಕೆಯವರಿಗೆ ಹಾಗೂ ದ್ವಿತೀಯ ಪಿಯುಸಿ ರಾಜ್ಯಕ್ಕೆ ಸ್ಥಾನ ಪಡೆದ ಗುರುವಾಯನಕೆರೆ ಎಕ್ಸ್ಎಲ್ ಕಾಲೇಜ್ ನ ವಿದ್ಯಾರ್ಥಿನಿಯರಾದ ಧನ್ವಿತ ಮತ್ತು ಅನುಪ್ರಿಯರನ್ನು ಸನ್ಮಾನಿಸಲಾಯಿತು.

ವಿಶೇಷ ಸಾಧಕರಾಗಿ ಸವಿತ ಮೋನಿಸ್ ಅವರನ್ನು ಹಾಗೂ ಭಾರತೀಯ ಸೇನೆಯ ನಿವೃತ್ತ ಯೋಧರಾದ ಗಣೇಶ್ ಲಾಯಿಲಾ, ಸಂಜೀವ ಕುಲಾಲ್, ಸುಂದರ್ ಸುಲ್ಕೇರಿ ಮೊಗ್ರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಪ್ರತಾಪ್ ಸಿಂಹ ನಾಯಕ್ , ಬೆಸ್ಟ್ ಫೌಂಡೇಶನ್ ಸಂಸ್ಥಾಪಕ ರಕ್ಷಿತ್ ಶಿವರಾಂ, ಡಾ. ಪ್ರದೀಪ್ ನಾವೂರು ಡಾ. ಶಶಿಧರ ಡೋಂಗ್ರೆ, ಡಾ. ಸುಶ್ಮಾ ಡೋಂಗ್ರೆ ಸಿರಿ ಸಂಸ್ಥೆಯ ಜನಾರ್ಧನ್ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

ಪುಸ್ತಕ ವಿರಣೆಯ ಬಳಿಕ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

error: Content is protected !!