ಮೂರನೇ ಬಾರಿಗೆ ಪ್ರಧಾನಿಯಾಗಿ ನಾಳೆ ನರೇಂದ್ರ ಮೋದಿ ಪ್ರಮಾಣವಚನ:ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಕರ್ನಾಟಕದ ನಾಲ್ವರಿಗೆ ಸಚಿವ ಸ್ಥಾನ:

 

 

 

 

 

 

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಕಂಡ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈ ಚುನಾವಣೆಯಲ್ಲಿ ಜೆಡಿಎಸ್ ಎರಡು ಸ್ಥಾನ ಪಡೆದುಕೊಂಡಿದೆ. ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಲೋಕಸಭೆ ಪ್ರವೇಶಿಸುತ್ತಿದ್ದಾರೆ.
ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗುತ್ತಿದ್ದು, ನಾಳೆ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರ ನೂತನ ಸಂಪುಟದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಚಿವರಾಗುವುದು ಖಚಿತ ಎಂದು ಮೂಲಗಳು ತಿಳಿಸಿವೆ.ಈ ಹಿಂದೆ ಕನಕಪುರ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಸಂಸದರಾಗಿದ್ದ ಕುಮಾರಸ್ವಾಮಿ ಅವರು, ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎರಡನೇ ಬಾರಿ ಲೋಕಸಭೆ ಪ್ರವೇಶ ಮಾಡಿದ್ದರು. ಈಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆದಿತ್ಯವಾರ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಅವರೊಂದಿಗೆ ಎಷ್ಟು ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಬೇಕು, ಯಾರು ಯಾರು ಸಂಪುಟ ಸೇರಬೇಕು. ಯಾವ ಸಚಿವರಿಗೆ ಯಾವ ಖಾತೆ ನೀಡಬೇಕೆಂಬ ವಿಚಾರದ ಬಗ್ಗೆ ಇಂದು ಎನ್‌ಡಿಎ ನಾಯಕರು ಚರ್ಚೆ ನಡೆಸಿ ನಿರ್ಧಾರ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಆದಿತ್ಯವಾರ ನಡೆಯುವ ಪ್ರಮಾಣವಚನ ಸಮಾರಂಭದಲ್ಲೇ ಕುಮಾರಸ್ವಾಮಿ ಅವರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಜೆಡಿಎಸ್‌‍, ಎನ್‌ಡಿಎ ಮೈತ್ರಿ ಭಾಗವಾಗಿರುವುದರಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ರಾಜ್ಯದಿಂದ ನಾಲ್ವರು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಪ್ರಲ್ಹಾದ್‌ ಜೋಶಿ ಹಾಗೂ ರಮೇಶ್‌ ಜಿಗಜಿಣಗಿ ಅಥವಾ ಗೋವಿಂದ ಕಾರಜೋಳ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವನೀಯ ಪಟ್ಟಿಯಲ್ಲಿದ್ದಾರೆ.ಸದ್ಯಕ್ಕೆ ಈ ನಾಲ್ವರಿಗೆ ಸೇರ್ಪಡೆ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲವಾದರೂ ಎಲ್ಲಾ ಸಂಸದರು ದೆಹಲಿಯಲ್ಲೇ ಇದ್ದಾರೆ. ರಾಜ್ಯಕ್ಕೆ ಈ ಬಾರಿ 3 ರಿಂದ 4 ಸ್ಥಾನಗಳು ಕೇಂದ್ರದಲ್ಲಿ ಸಿಗುವುದು ಖಚಿತ ಎಂದು ಹೇಳಲಾಗುತ್ತಿದೆ. ಬಿಜೆಪಿ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಬಹುಮತ ಗಳಿಸಲು ಸಾಧ್ಯವಾಗದ ಕಾರಣ ಮಿತ್ರಪಕ್ಷಗಳಿಗೆ ಸಂಪುಟದಲ್ಲೂ ಅವಕಾಶ ಕಲ್ಪಿಸಬೇಕಾಗಿದೆ. ಹೀಗಾಗಿ ಮೊದಲ ಕಂತಿನಲ್ಲೇ ಹೆಚ್.ಡಿ.ಕುಮಾರಸ್ವಾಮಿ ಸಚಿವ ಸ್ಥಾನ ಬಹುತೇಕ ನಿಶ್ಚಿತ ಎನ್ನಲಾಗಿದೆ.
ಇನ್ನೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆದ್ದಿರುವ ಡಾ. ಸಿ.ಎನ್‌.ಮಂಜುನಾಥ್‌ ಅವರನ್ನು ಸಹ ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಬಿಜೆಪಿ ಸಕಾರಾತ್ಮಕ ನಿಲುವು ಇಟ್ಟುಕೊಂಡಿದೆ. ಒಂದು ಕಡೆ ಕುಮಾರಸ್ವಾಮಿ, ಮತ್ತೊಂದು ಕಡೆ ಡಾ.ಸಿ.ಎನ್‌. ಮಂಜುನಾಥ್‌ ಸೇರ್ಪಡೆಯಾದರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಆನೆ ಬಲ ಬರಲಿದೆ ಎಂಬ ಲೆಕ್ಕಾಚಾರವು ಇದೆ. ಒಂದು ಮೂಲದ ಪ್ರಕಾರ, ಡಾ. ಸಿ.ಎನ್‌.ಮಂಜುನಾಥ್‌ ಅವರಿಗೆ ಎರಡನೇ ಅವಧಿಯಲ್ಲಿ ಸಚಿವ ಸಂಪುಟ ಪುನರ್‌ ರಚನೆಯಾಗುವ ವೇಳೆ ಅವಕಾಶ ಸಿಗಬಹುದು ಎಂಬ ಮಾತುಗಳು ಕೇಳಿ ಬಂದಿವೆ. ಎಲ್ಲದಕ್ಕೂ ನಾಳೆ ಉತ್ತರ ಸಿಗಲಿದೆ.

error: Content is protected !!