ಅಕ್ಷರ ಯೋಧ ರಾಮೋಜಿ ರಾವ್ ಅಸ್ತಂಗತ: ‘ಮಾಧ್ಯಮ ವ್ಯಾಪಾರವಲ್ಲ, ಸಮಾಜವನ್ನು ಜಾಗೃತಗೊಳಿಸುವ ವೇದಿಕೆ’: ‘ನಿತ್ಯ ಬೆಳಗಾಗುವ ಮುನ್ನ ಸತ್ಯ ಬಯಲಾಗಲಿ’ ಸಿದ್ಧಾಂತಕ್ಕೆ ಬದ್ಧರಾಗಿ ಬದುಕಿದ ದಿಗ್ಗಜ

ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ತಮ್ಮ 87 ವಯಸ್ಸಿನಲ್ಲಿ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದು ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ  ಇವರನ್ನು ಜೂ,5ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಸಂಬಂಧಿ ಸಮಸ್ಯೆಯಿಂದ ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ.

1936 ನವೆಂಬರ್ 16 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದ ಇವರು 1969 ರಲ್ಲಿ ‘ಅನ್ನದಾತ’ ಎಂಬ ಮಾಸ ಪತ್ರಿಕೆ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯಿಟ್ಟರು. ‘ಮಾಧ್ಯಮ ವ್ಯಾಪಾರವಲ್ಲ, ಸಮಾಜವನ್ನು ಜಾಗೃತಗೊಳಿಸುವ ವೇದಿಕೆ’ ಎಂದೇ ನಂಬಿದ್ದರು. ‘ನಿತ್ಯ ಬೆಳಗಾಗುವ ಮುನ್ನ ಸತ್ಯ ಬಯಲಾಗಲಿ’ ಇದು ರಾಮೋಜಿ ರಾವ್ ಅವರ ಸಿದ್ಧಾಂತವಾಗಿತ್ತು. ತಮ್ಮ ಜೀವಿತಾವಧಿಯಲ್ಲಿ ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿ, ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.

ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು ಕೃಷಿ ಲೋಕಕ್ಕೆ ಅಪಾರ ಕೊಡುಗೆ ನೀಡಿ, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರೈತರ ನಡುವೆ ಸೇತುವೆ ನಿರ್ಮಿಸಿದವರು. ಕೃಷಿಯ ಸುಧಾರಿತ ವಿಧಾನಗಳು, ತಾಂತ್ರಿಕ ವಿಧಾನಗಳು ಮತ್ತು ಹೊಸ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ನೀಡಿದ ಪರಿಣಾಮ ತೆಲುಗು ರೈತರು ಹೊಸ ಪ್ರಯೋಗಗಳನ್ನು ಪ್ರಾರಂಭಿಸಿದರು.

ಈನಾಡು ದಿನಪತ್ರಿಕೆ ತೆಲುಗು ಓದುಗರ ದೈನಂದಿನ ದಿನಚರಿಯಾಗಿತ್ತು. ಪ್ರಾಮಾಣಿಕತೆ ಮತ್ತು ಸಮಗ್ರತೆ ಈ ಪತ್ರಿಕೆಯಲ್ಲಿ ಸಾಬೀತಾಗಿತ್ತು. 1976ರ ಮೊದಲಾರ್ಧದಲ್ಲಿ 48,339 ಪ್ರತಿಗಳಿದ್ದ ಈ ನಾಡು ದಿನಪತ್ರಿಕೆ 2011ರ ಮೊದಲಾರ್ಧ ಈ ಸಂಖ್ಯೆ ಬಹು ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿತ್ತು . ಕೋವಿಡ್ ಸಮಯದಲ್ಲಿ ಪತ್ರಿಕೆಗಳು ಅಂತ್ಯ ಕಾಣುತ್ತದೆ ಎಂದು ಅನುಮಾನಿಸಿದ್ದ ಸಂದರ್ಭದಲ್ಲೂ ರಾಮೋಜಿ ಅವರ ಪ್ರಯತ್ನಗಳಿಂದ ಪತ್ರಿಕೆ ಮುದ್ರಣ ಕೊಂಚವು ಬದಲಾಗಲಿಲ್ಲ. ಇಂದಿಗೂ ಇದು 23 ಕೇಂದ್ರಗಳಲ್ಲಿ ಮುದ್ರಿಸಲ್ಪಡುತ್ತಿದ್ದು ಅತಿ ಹೆಚ್ಚು ಪ್ರಸರಣ ಹೊಂದಿರುವ ತೆಲುಗು ದಿನಪತ್ರಿಕೆಯಾಗಿದೆ.

ಮುದ್ರಣ ಮಾಧ್ಯಮ ಜೊತೆ ಎಲೆಕ್ಟ್ರಾನಿಕ್‍ ಮಾದ್ಯಮಕ್ಕೂ ಪ್ರವೇಶ ಪಡೆದ ಇವರು 1995ರ ಆಗಸ್ಟ್ 27ರಂದು ‘ಈಟಿವಿ ತೆಲುಗು’ ಆರಂಭಿಸಿ ತೆಲುಗು ರಾಜ್ಯದಲ್ಲೇ ಸಂಚಲನ ಮೂಡಿಸಿದರು. ಅಪರಿಮಿತ ಮನರಂಜನೆ ನೀಡುವ ಮೂಲಕ ತೆಲುಗಿನಲ್ಲಿ ಮನೆ ಮಾತಾಗಿದೆ ಉಳಿದ ‘ಈಟಿವಿ ತೆಲುಗು’ ದಿನದ 24 ಗಂಟೆಯೂ ವಿನೂತನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿದೆ.

ಈಟಿವಿ ಪ್ಲಸ್, ಈಟಿವಿ ಸಿನಿಮಾ, ಈಟಿವಿ ಭಾರತ ಹೀಗೆ ಈಟಿವಿ ಜಾಲ ವಿಸ್ತರಣೆ ಮಾಡುತ್ತಾ ದೊಡ್ಡ ಸಂಚಲನ ಮೂಡಿಸಿ ಕಾಲಕಾಲಕ್ಕೆ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಈಟಿವಿ ಜಾಲವನ್ನು ವಿಸ್ತರಿಸುತ್ತಲೇ ಬಂದರು.

ಪ್ರಧಾನಿ ಮೋದಿ ಸಂತಾಪ


ಭಾರತೀಯ ಮಾಧ್ಯಮದಲ್ಲಿ ಕ್ರಾಂತಿ ಮಾಡಿದ ರಾಮೋಜಿರಾವ್ ಅವರ ನಿಧನ ತೀವ್ರ ದುಃಖ ತಂದಿದೆ. ಪತ್ರಿಕೋದ್ಯಮ ಮತ್ತು ಚಿತ್ರರಂಗದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ್ದಾರೆ. ಅವರ ಅವಿರತ ಪ್ರಯತ್ನಗಳ ಫಲವಾಗಿ ಮಾಧ್ಯಮ ಮತ್ತು ಮನೋರಂಜನಾ ಜಗತ್ತಿನಲ್ಲಿ ಹೊಸ ನಾವೀನ್ಯತೆಯನ್ನು ಸೃಷ್ಟಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

error: Content is protected !!