ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಒಂಟಿ ಸಲಗವೊಂದು ರಸ್ತೆಯಲ್ಲಿ ಕಾಣಿಸುತ್ತಿರುವುದು ವಾಹನ ಸವಾರರಿಗೆ ಭಯವನ್ನುಂಟು ಮಾಡಿದೆ.ಆಹಾರವನ್ನರಸಿ ಬಂದ ಆನೆ ರಸ್ತೆ ಬದಿ ಇರುವ ಈಂದ್ ಜಾತಿಯ ಮರವನ್ನು ಕೆಡವಿ ಅದನ್ನು ತಿನ್ನುತ್ತಿದೆ. ಮಂಗಳವಾರ ಬೆಳಗ್ಗೆ ಕೂಡ ಎರಡನೇ ತಿರುವಿನಲ್ಲಿ ಆನೆ ರಸ್ತೆ ಬದಿಯ ಮರದ ಕೊಂಬೆಯನ್ನು ತಿನ್ನುತ್ತಾ ರಸ್ತೆ ಮಧ್ಯೆಯೇ ನಿಂತಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇಷ್ಟರವರೆಗೆ ಯಾವುದೇ ವಾಹನಗಳಿಗಾಗಲಿ ಜನರಿಗಾಗಲಿ ದೊಡ್ಡ ಹಾನಿ ಮಾಡದ ಕಾಡಾನೆ ಮುಂದೆ ಅಪಾಯವನ್ನು ತಂದೊಡ್ಡಬಹುದು ಅದಲ್ಲದೇ ಆನೆಯನ್ನು ನೋಡಿದ ಕೂಡಲೇ ವಾಹನ ಸವಾರರು ಹೆದರಿ ವಾಹನ ಓಡಿಸಿ ಅಪಾಯ ತಂದೊಡ್ಡಬಹುದು ಎಂಬ ಆತಂಕ ಪ್ರಾರಂಭವಾಗಿದೆ. ಈಗಾಗಲೇ ತಾಲೂಕಿನ ಹಲವೆಡೆ ಆನೆ ದಾಳಿಯಿಂದ ಕೃಷಿ ನಾಶ ಹೊಂದಿ ಕೃಷಿಕರು ಚಿಂತಿತರಾಗಿದ್ದಾರೆ. ಅದ್ದರಿಂದ ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳ ಬೇಕು ಇಲ್ಲದಿದ್ದರೆ ಚಾರ್ಮಾಡಿ ರಸ್ತೆಯಲ್ಲಿ ವಾಹನ ಸಂಚಾರ ದೊಡ್ಡ ದುರಂತವಾಗಬಹುದು ಎಂಬ ಭಯ ಪ್ರಾರಂಭವಾಗಿದೆ.