
ಸಚಿನ್ ಕೆ.ಆರ್. ಚಂದನ್
ಮಂಗಳೂರು: ನಗರದ ಉರ್ವ ಠಾಣಾ ವ್ಯಾಪ್ತಿಯ ಕೋಡಿಕಲ್ ನಾರಾಯಣಗುರು ಸಮುದಾಯ ಭವನ ರಸ್ತೆಯ ಮುಂಭಾಗ ರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಕೇರಳದಲ್ಲಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಅರಸಿನಮಕ್ಕಿ ನಿವಾಸಿ ಸಚಿನ್ ಕೆ ಆರ್(24) ಮತ್ತು ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ ಚಂದನ್(24) ಬಂಧಿತ ಆರೋಪಿಗಳು. ಮೇ 24ರಂದು ನಸುಕಿನ ವೇಳೆ ಸುಮಾರು 02:10 ಗಂಟೆಗೆ ಕೋಡಿಕಲ್ ನಾರಾಯಣಗುರು ಸಮುದಾಯ ಭವನ ರಸ್ತೆಯ ಮುಂಭಾಗ ಉರ್ವ ಪೊಲೀಸ್ ಠಾಣಾ ಪೊಲೀಸ್ ಸಿಬ್ಬಂದಿಗಳಿಬ್ಬರು ಬೀಟ್ ಕರ್ತವ್ಯದಲ್ಲಿದ್ದರು.
ಈ ವೇಳೆ, ಎಲೆಕ್ಟ್ರಿಕಲ್ ಸ್ಕೂಟರ್‌ನಲ್ಲಿ ಬಂದ ಇಬ್ಬರು ಯುವಕರಲ್ಲಿ, ಸಹಸವಾರ ಏಕಾಏಕಿ ಸಿಮೆಂಟ್ ಶೀಟ್‌ನ ತುಂಡಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾನೆ. ಪರಿಣಾಮ ಪೊಲೀಸ್ ಸಿಬ್ಬಂದಿಯ ತಲೆಗೆ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಯತ್ನ ನಡೆಸಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಭೇದಿಸಿದ ಸಿಸಿಬಿ ಪೊಲೀಸರು: ಸದ್ಯ ಈ ಪ್ರಕರಣವನ್ನು ಭೇದಿಸಿದ ಸಿಸಿಬಿ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಖಚಿತ ಮಾಹಿತಿಯ ಆಧಾರದಲ್ಲಿ ಕೇರಳ ರಾಜ್ಯದ ಕಾಂಞಗಾಡ್ ಪ್ರದೇಶದಲ್ಲಿ ಮೇ 26 ರಂದು ಬಂಧಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಆರೋಪಿಗಳನ್ನು ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ಕೃತ್ಯಕ್ಕೆ ಉಪಯೋಗಿಸಿರುವ ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.
ಆರೋಪಿಗಳ ಹಿನ್ನೆಲೆ ಹೀಗಿದೆ: ಆರೋಪಿಗಳು ಮಂಗಳೂರಿನ ಅಶೋಕನಗರದ ಫಲ್ಗುಣಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರೋಪಿಗಳ ಪೈಕಿ ಸಚಿನ್ ಕೆ.ಆರ್. ಕುಂಟಿಕಾನದ ಫ್ಯಾಕ್ಟರಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಚಂದನ್ ಕೂಳೂರಿನ ಅದ್ವೈತ್ ಕಿಯಾ ಶೋ ರೂಮ್‌ನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು. ಮಧ್ಯರಾತ್ರಿ ವೇಳೆಗೆ ಸುತ್ತಾಡುತ್ತಿದ್ದ ಆರೋಪಿಗಳನ್ನು ಬೀಟ್ ಪೊಲೀಸರು ತಡೆದು ಪ್ರಶ್ನಿಸಿದ್ದಕ್ಕೆ ಸಿಟ್ಟುಗೊಂಡು ಪೊಲೀಸರ ಮೇಲೆ , ಮತ್ತೊಮ್ಮೆ ಬಂದ ಆರೋಪಿಗಳು ಸಿಮೆಂಟ್ ಸೀಟಿನ ತುಂಡಿನಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಗಳು ತನಿಖೆ ವೇಳೆ ತಿಳಿಸಿದ್ದಾರೆ