ಬೆಳ್ತಂಗಡಿ : ತುಮಕೂರಿನ ಕುಚ್ಚಂಗಿ ಕೆರೆಯಲ್ಲಿ ಬೆಳ್ತಂಗಡಿಯ ಮೂವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಆರು ಮಂದಿಯನ್ನು ತುಮಕೂರು ಜಿಲ್ಲೆಯ ಕೋರಾ ಪೊಲೀಸರು ಬಂಧಿಸಿದ್ದು ಬಂಧಿತರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ.
ಮಾ 22 ರಂದು ಮಧ್ಯಾಹ್ನ ಸುಮಾರು 1.15 ಗಂಟೆಗೆ ತುಮಕೂರು ಜಿಲ್ಲೆಯ ಕೋರಾ ಪೊಲೀಸ್ ಠಾಣಾವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ಕಾರಿನಲ್ಲಿ 3 ವ್ಯಕ್ತಿಗಳ ದೇಹಗಳು ಕಾರು ಸಹಿತ ಸುಟ್ಟು ಕರಕಲಾದ ಸ್ಥಿತಿಯಲ್ಲಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಕೋರಾ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಕಾರಿನ ಹಿಂಭಾಗದ ಸೀಟಿನಲ್ಲಿ ಒಂದು ಮತ್ತು ಡಿಕ್ಕಿಯಲ್ಲಿ ಎರಡು ದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಅದರಂತೆ ಕೋರಾ ಪೊಲೀಸ್ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮೂವರಿದ್ದ ಕಾರಿನ ನಂಬರಿನ ಮೂಲಕ ಮಾಹಿತಿ ಸಂಗ್ರಹಿಸಿ ಇಬ್ಬರು ಆರೋಪಿಗಳಾದ ಪಾತರಾಜು @ರಾಜು ಮತ್ತು ಗಂಗರಾಜು ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.
ತುಮಕೂರಿನ ಶಿರಾ ಗೇಟ್ ಬಳಿ ವಾಸವಿರುವ 1) ಪಾತರಾಜು @ ರಾಜು @ ರಾಜಗುರು @ಕುಮಾರ್, ಇನ್ನೊರ್ವ ಆರೋಪಿ ಸತ್ಯಮಂಗಲದ ವಾಸಿ ಗಂಗರಾಜು ಬಿನ್ ಹನುಮಂತರಾಯಪ್ಪ ಎಂಬಾತನನ್ನು ಮಾ.25 ರಂದು ಬಂಧಿಸಿ. ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಪ್ರಕರಣ ಬಳಿಕ ಪರಾರಿಯಾದ ಆರು ಜನ ಆರೋಪಿಗಳಾದ ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂದನ್(24) , ಸಂತೇಪೇಟೆಯ ನವೀನ್(24) ,ವೆಂಕಟೇಶಪುರದ ಕೃಷ್ಣ(22), ಹೊಂಬಯ್ಯನಪಾಳ್ಯದ ಗಣೇಶ್(19), ನಾಗಣ್ಣನಪಾಳ್ಯದ ಕಿರಣ್(23) ,ಕಾಳಿದಾಸನಗರದ ಸೈಮನ್(18) ಸೇರಿ ಆರು ಜನರನ್ನು ಮುರುಡೇಶ್ವರದ ಲಾಡ್ಜ್ ನಲ್ಲಿ ಮಾ.26 ರಂದು ಸಂಜೆ ಬಂಧಿಸಿ ತುಮಕೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಏಳು ದಿನಗಳ ಪೊಲೀಸ್ ಕಸ್ಟಡಿ ನೀಡಿದೆ.
ಆರು ಜನ ಆರೋಪಿಗಳು ತುಮಕೂರಿನಲ್ಲಿ ಹೂವಿನ ವ್ಯಾಪಾರ ಮಾಡುವವರಾಗಿದ್ದು ಮೂರು ಕೆಜಿ ಚಿನ್ನ ಸಿಗುವ ಆಸೆಯಲ್ಲಿ ಪಾತರಾಜ್ ಮಾಹಿತಿಯಂತೆ ಕೇವಲ 8,000 ಹಣವನ್ನು ಪಡೆದು ಕೊಲೆ ಮಾಡಿದ್ದಾರೆ.ಬಳಿಕ ರೈಲು ಮೂಲಕ ಮುರುಡೇಶ್ವರದ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಪಾತರಾಜ್ ಲಾಕ್ ಆಗಿ ಪೊಲೀಸರ ವಿಚಾರಣೆಯಲ್ಲಿ ಉಳಿದ ಆರು ಜನ ಆರೋಪಿಗಳ ಮಾಹಿತಿ ನೀಡಿದ್ದ ಎನ್ನಲಾಗಿದೆ.
ಕೊಲೆ ಮಾಡಿದ ಬಳಿಕ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಲು ಆರೋಪಿಗಳು ಪಕ್ಕದ ಪೆಟ್ರೋಲ್ ಬಂಕ್ ನಿಂದ 15 ಲೀಟರ್ ಪೆಟ್ರೋಲ್ ಖರೀದಿ ಮಾಡಿ ತಂದಿರುವ ಬಗ್ಗೆ ಪೊಲೀಸರಿಗೆ ಸಿಸಿ ಕ್ಯಾಮರದ ದೃಶ್ಯ ಸಾಕ್ಷಿಯಾಗಿ ಸಿಕ್ಕಿದೆ.