ಬೆಳ್ತಂಗಡಿ: ಕಳೆದ ನಾಲ್ಕು ದಿನಗಳ ಹಿಂದೆ ತುಮಕೂರು ಜಿಲ್ಲೆಯ ಕುಚ್ಚಂಗಿ ಕೆರೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರಿನಲ್ಲಿ ಬೆಳ್ತಂಗಡಿಯ ಮೂವರ ಶವ ಪತ್ತೆಯಾಗಿತ್ತು. ಈ ಸುದ್ಧಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಅದರೆ ಬೆಳ್ತಂಗಡಿಯ ಜನಪ್ರತಿನಿಧಿಗಳಿಗೆ ಮಾತ್ರ ಇನ್ನೂ ಈ ವಿಚಾರ ತಿಳಿದಂತಿಲ್ಲ . ಯಾಕೆಂದರೆ ಮೃತ ಮನೆಯವರಿಗೆ ಒಂದು ಸಾಂತ್ವನ ಹೇಳಿ ಧೈರ್ಯ ಹೇಳುವಷ್ಟೂ ಸಮಯ ಅವರಿಗೆ ಇಲ್ಲದಂತಾಗಿದೆ. ಈ ಬಗ್ಗೆ ಮೃತ ವ್ಯಕಿಗಳ ಕುಟುಂಬಸ್ಥರು ಹಾಗೂ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಉಜಿರೆ ಕುಂಟಿನಿ ನಿವಾಸಿ ಕೊಲೆಗೀಡಾದ ಶಾಹುಲ್ ಹಮೀದ್ ಅವರ ಸಂಬಂಧಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ ಇಡೀ ಸಮಾಜ ಈ ಘಟನೆಯಿಂದ ನೊಂದಿದೆ. ಮೂವರನ್ನೂ ಅತೀ ಕ್ರೂರ ರೀತಿಯಲ್ಲಿ ಕೊಂದು ಸುಟ್ಟು ಹಾಕಿದ ಪರಿಣಾಮ ಮೂವರ ಮೃತ ದೇಹದ ಗುರುತು ಪತ್ತೆ ಹಚ್ಲಲು ಸಾಧ್ಯವಾಗದ ರೀತಿಯಲ್ಲಿ ಇದೆ. ಕುಟುಂಬಸ್ಥರು ಇದರ ಬಗ್ಗೆ ಯಾರಲ್ಲಿ ಹೇಳುವುದು ನಮಗೆ ನ್ಯಾಯ ದೊರಕಿಸಿಕೊಡುವವರು ಯಾರು ಎಂದು ಕಣ್ಣೀರು ಸುರಿಸುತಿದ್ದರೂ ಬೆಳ್ತಂಗಡಿ ತಾಲೂಕಿನ ಶಾಸಕರು ಸೇರಿದಂತೆ ಯಾರೂ ಕೂಡ ಮನೆಯವರಿಗೆ ಧೈರ್ಯ ತುಂಬುವ ಕೆಲಸ ಮಾಡದಿರುವುದು ತುಂಬಾ ನೋವನ್ನುಂಟು ಮಾಡಿದೆ. ಮದ್ದಡ್ಕದ ಇಸಾಕ್ ಅವರ ಕುಟುಂಬಿಕರು ಬೇಸರ ವ್ಯಕ್ತಪಡಿಸಿ ಹೊರ ತಾಲೂಕಿನ ಕೆಲವು ಜನಪ್ರತಿನಿಧಿಗಳನ್ನು ಹೊರತು ಪಡಿಸಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರುಗಳಾದ ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್, ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಈ ಭೀಕರ ಘಟನೆಯನ್ನು ಖಂಡಿಸುವ ಅಥವಾ ಸಮಗ್ರ ತನಿಖೆಗೆ ಆಗ್ರಹಿಸುವಂತಹ ಒಂದು ಹೇಳಿಕೆ ನೀಡದಿರುವುದು ನಮಗೆ ಬೇಸರ ತರಿಸಿದೆ. ಮಸಲ್ಮಾನರೆಂಬ ಕಾರಣಕ್ಕೆ ಈ ರೀತಿಯ ನಿರ್ಲಕ್ಷ್ಯವೇ ಯಾರಿಗೂ ಈ ರೀತಿ ಆಗಬಾರದು ಎಲ್ಲಾ ವಿಚಾರದಲ್ಲಿ ರಾಜಕೀಯ ಮಾಡದೇ ಕೆಲವೊಮ್ಮೆ ರಾಜಕೀಯ ಮರೆತು ಮಾನವೀಯತೆಯತ್ತ ಯೋಚನೆ ಮಾಡಬೇಕಾಗಿದೆ. ಶಿರ್ಲಾಲಿನ ಸಿದ್ದಿಕ್ ಅವರ ತಂದೆ ಮಾತನಾಡಿ ನನ್ನ ಮಗ ಇನ್ನು ಬರುವುದಿಲ್ಲ. ನಮ್ಮ ತಾಲೂಕಿನ ಯಾವನೇ ಒಬ್ಬ ಜನಪ್ರತಿನಿಧಿ ನಮಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ ಯಾಕೆಂದರೆ ನಾವು ಬಡವರು ಎಂಬ ಕಾರಣಕ್ಕೊ ಅಥವಾ ಇನ್ನೇನಾದರೂ ಕಾರಣವೋ ಗೊತ್ತಿಲ್ಲ ಎಂದು ದುಃಖಿಸಿದರು.ಲೋಕಸಭೆ ಚುನಾವಣೆ ಘೋಷಣೆಯಾಗಿದೆ ನೊಂದಿರುವ ಮೃತ ಮನೆಯವರಿಗೆ ಸಾಂತ್ವನ ಹೇಳಲೂ ನೀತಿ ಸಂಹಿತೆ ಅಡ್ಡಿಯಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಸ್ಥಳೀಯರು ಕೇಳುತ್ತಿದ್ದಾರೆ.