ಬೆಳ್ತಂಗಡಿ: ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣ: ಮಳೆಯಿಂದಾದರೂ ಧೂಳಿಗೆ ಸಿಗಬಹುದೇ ಮುಕ್ತಿ?

ಬೆಳ್ತಂಗಡಿ: ಸುಡು ಬಿಸಿಲಿಗೆ ಕಾದ ನೆಲ, ನೀರಿಲ್ಲದೆ ಹಾಹಾಕಾರ, ಬೆಳ್ತಂಗಡಿ ತಾಲೂಕಿಗೆ ಈ ಬಾರಿ ಬಿಸಿಲಿನ ಖಾರ ಎಂದಿಗಿಂತ ಹೆಚ್ಚಾಗಿದೆ. ತಾಲೂಕಿನಲ್ಲಿ ಈಗಾಗಲೆ ನೀರಿನ ಸಮಸ್ಯೆಯೂ ಕಾಡತೊಡಗಿದೆ. ಈ ಮಧ್ಯೆ ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು ಮಳೆಯ ನಿರೀಕ್ಷೆಯಿದೆ.

ಬಿಸಿಲಿನ ಬಿಸಿ ತಾಳಲಾರದ ಜನ ಮಳೆಯ ನಿರೀಕ್ಷೆಯಲ್ಲಿದ್ದಾರೆ, ಸದ್ಯ ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ನೀಡಿದ್ದು ಈ ಬೆನ್ನಲ್ಲೆ ಇಂದಿನ ಮೋಡಕವಿದ ವಾತಾವರಣ ಕೊಂಚ ಸಮಾಧಾನ ತಂದಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಧೂಳಿನಿಂದ ಸಂಚರಿಸಲಾಗದೆ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಜನ ಸಂಪರ್ಕ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ರಸ್ತೆಗೆ ಆಗಾಗ ನೀರು ಹಾಕಬೇಕು ಎಂದು ತಿಳಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮಧ್ಯಾಹ್ನದ ಬಿಸಿಲಿಗೆ ಧೂಳಿನ ಪ್ರಮಾಣ ಹೆಚ್ಚಾಗುತ್ತಿದ್ದು ಸಮೀಪ ಮನೆಗಳಿಗೆ, ಮಳಿಗೆಗಳಿಗೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಅದೃಷ್ಟವಶಾತ್ ಮಳೆ ಬಂದರೆ ಕೊನೆಪಕ್ಷ ಧೂಳಿನಿಂದ ಮುಕ್ತಿ ಸಿಗಬಹುದು ಎಂಬುದು ಜನರ ಅಭಿಪ್ರಾಯ.

ಬಿಸಿಲ ಬೇಗೆಗೆ ಕಾಡಿನ ಪ್ರಾಣಿಗಳು ನಾಡಿಗೆ ಲಗ್ಗೆ ಇಟ್ಟಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ನದಿಗಳು ಬತ್ತಿಹೋಗುತ್ತಿದ್ದು, ಕಾಡು ಪ್ರಾಣಿಗಳಿಗೆ, ಪಕ್ಷಿಗಳಿಗೆ ಬಾಯಾರಿಕೆ ಇಂಗಿಸಿಕೊಳ್ಳಲಾಗುತ್ತಿಲ್ಲ. ಕಟ್ಟಡ ಕಾರ್ಮಿಕರಿಗೆ 11 ಗಂಟೆಯ ಬಳಿಕ ಕೆಲಸ ಮಾಡಲು ಅಸಾಧ್ಯವಾಗುತ್ತಿದೆ. ಬಿಸಿ ಏರಿರುವ ವಾತವರಣಕ್ಕೆ ಮಳೆಯ ಸಿಂಚನವಾಗಿ ಕಾದ ನೆಲವೂ ತಂಪಾಗಲಿ ಎಂದು ಜನ ಆಶಿಸುತ್ತಿದ್ದಾರೆ.

error: Content is protected !!