ಬೆಳ್ತಂಗಡಿ; ರಸ್ತೆ ದಾಟುತಿದ್ದ ಶಾಲಾ ಬಾಲಕನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ಘಟನೆ ಮಾ 12 ರಂದು ಚರ್ಚ್ ರೋಡ್ ಕ್ರಾಸ್ ಬಳಿ ನಡೆದಿದೆ.ಸ್ಥಳೀಯ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿ ಪರೀಕ್ಷೆಗೆ ತೆರಳಲು ಚರ್ಚ್ ರೋಡ್ ಕಡೆಯಿಂದ ಬಂದು ಹೆದ್ದಾರಿ ದಾಟುತ್ತಿದ್ದ ವೇಳೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬಾಲಕನಿಗೆ ಕಾಲಿಗೆ ಸ್ವಲ್ಪ ಗಾಯವಾಗಿದ್ದು ತಕ್ಷಣ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಂತರ ಪರೀಕ್ಷೆ ಬರೆಯಲು ತೆರಳಿದ್ದಾನೆ ಎಂದು ತಿಳಿದು ಬಂದಿದೆ.
ಚರ್ಚ್ ರೋಡ್ ಬಳಿ ದಿನನಿತ್ಯ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು ಮಕ್ಕಳು ರಸ್ತೆ ದಾಟುವುದೇ ದೊಡ್ಡ ಸಾಹಸ ಎಂಬಂತಾಗಿದೆ .ಚರ್ಚ್ ರೋಡ್ ಜಂಕ್ಷನ್ ನಲ್ಲಿ ಚರ್ಚ್ ಶಾಲೆ, ಹೋಲಿ ರೀಡಿಮರ್, ಸೈಂಟ್ ತೆರೇಸಾ, ವಾಣಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಹಲವಾರೂ ಶಾಲಾ ಕಾಲೇಜು ಮಕ್ಕಳು ಸೇರಿದಂತೆ ಸಾರ್ವಜನಿಕರು ರಸ್ತೆ ದಾಟುತಿರುತ್ತಾರೆ. ಅದರೆ ಇಲ್ಲಿ ಯಾವುದೇ ಸ್ಪೀಡ್ ಬ್ರೇಕರ್ ಇಲ್ಲದೇ ಇರುವುದರಿಂದ ಹಲವಾರು ಅಪಘಾತಗಳು ದಿನನಿತ್ಯ ಇಲ್ಲಿ ನಡೆಯುತ್ತಿರುತ್ತದೆ. ಅದಲ್ಲದೇ ಸವಣಾಲು ಹಾಗೂ ಇತರ ಕಡೆಗಳಿಗೆ ಸಂಚಾರ ಮಾಡುವ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾದ ನಂತರವಂತೂ ಇಲ್ಲಿ ರಸ್ತೆ ದಾಟುವುದು ಇನ್ನಷ್ಟು ಅಪಾಯದ ರೀತಿಯಲ್ಲಿ ಕಂಡು ಬರುತ್ತಿದೆ. ಗುರುವಾಯನಕೆರೆ ಹಾಗೂ ಬೆಳ್ತಂಗಡಿ ಕಡೆಯಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಅತೀ ವೇಗವಾಗಿ ಹೋಗುವುದರಿಂದ ರಸ್ತೆ ದಾಟುವುದೇ ಸಾಹಸಮಯವಾಗಿದೆ, ಚಿಕ್ಕ ಮಕ್ಕಳಂತೂ ಇದರ ಗೊಡವೆ ಇಲ್ಲದೇ ರಸ್ತೆ ದಾಟುವುದು ಮತ್ತಷ್ಟು ಅಪಾಯವನ್ನು ತಂದೊಡ್ಡುತಿದೆ. ಅದ್ದರಿಂದ ಸಾರ್ವಜನಿಕರ ಹಾಗೂ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಬ್ಯಾರಿಕೇಡ್ ಅಥವಾ ಟ್ರಾಫಿಕ್ ಪೊಲೀಸರ ಅವಶ್ಯಕತೆ ಈ ಜಂಕ್ಷನ್ ನಲ್ಲಿ ಇದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ದೊಡ್ಡ ಅನಾಹುತಗಳನ್ನು ತಪ್ಪಿಸಬೇಕಿದೆ.