ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕೆಎಂಎಫ್ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದೊಂದಿಗೆ ಸರ್ಕಾರಿ ಶಾಲಾ ಮಕ್ಕಳಿಗಾಗಿ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.22ರಂದು ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಚಾಲನೆ ನೀಡಿದರು.
ಈ ಬಗ್ಗೆ ಮಾತನಾಡಿದ ಸಿ.ಎಮ ಸಿದ್ದರಾಮಯ್ಯ, ಅತ್ಯಂತ ಪೌಷ್ಠಿಕವಾದ ರಾಗಿ ಮಾಲ್ಟ್ ಕೊಡುವ ಕಾರ್ಯಕ್ರಮ ಶುರುವಾಗಿದೆ. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಮಕ್ಕಳು ರಕ್ತಹೀನತೆ ಮತ್ತು ಪೌಷ್ಠಿಕಾಂಶ ಕೊರತೆಯಿಂದ ಬಳಲಬಾರದು ಎಂಬುದೇ ಇದರ ಉದ್ದೇಶ. ಶ್ರೀಮಂತರ ಮಕ್ಕಳ ರೀತಿ ಬಡವರು, ಶ್ರಮಿಕರು, ದಲಿತ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕು. ಏಕೆಂದರೆ ಮಕ್ಕಳೇ ದೇಶದ, ಸಮಾಜದ ಭವಿಷ್ಯವನ್ನು ರೂಪಿಸುತ್ತಾರೆ ಎಂದರು.
2013 ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಮ್ಮಲ್ಲಿ ಹಾಲು ಉತ್ಪಾದನೆ ಹೆಚ್ಚಾಯಿತು. ಈ ಹೆಚ್ಚುವರಿ ಹಾಲಿನ ಮಾರಾಟ ಮತ್ತು ಹಾಲಿನ ಉಪಉತ್ಪನ್ನಗಳನ್ನು ಹೆಚ್ಚುವರಿಯಾಗಿ ಉತ್ಪಾದನೆ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಆ ಕೂಡಲೇ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು ಕೊಡುವ ಕ್ಷೀರಭಾಗ್ಯ ಯೋಜನೆಯನ್ನು ಆರಂಭಿಸಿದೆ.
ಕೆಎಂಎಫ್ ಮೂಲಕ ಮಕ್ಕಳಿಗೆ ಹಾಲು ಹೋಗುತ್ತದೆ. ಈ ಹಾಲಿನ ಹಣವನ್ನು ಸರ್ಕಾರ ಕೆಎಂಎಪ್ ಗೆ ನೀಡುತ್ತದೆ. ಆ ಮೂಲಕ ಕೆಎಂಎಫ್ ಗೆ ಹಾಲು ಸರಬರಾಜು ಮಾಡುವ ರೈತರಿಗೆ ನೆರವಾಗುವ ತೀರ್ಮಾನ ಮಾಡಿದೆವು. ಇದರ ಜೊತೆಗೆ ಕಳೆದ ಬಜೆಟ್‌ನಲ್ಲಿ ಶಾಲಾ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ನೀಡುವ ಕಾರ್ಯಕ್ರಮ ಆರಂಭಿಸಿದೆವು ಎಂದರು.