ಉಜಿರೆ, ಪೆರಿಯಶಾಂತಿ, ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ : ಫೆ 22ರಂದು ಶಿವಮೊಗ್ಗದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಿಲಾನ್ಯಾಸ:

 

ಬೆಳ್ತಂಗಡಿ: ತಾಲೂಕಿನ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಅನುದಾನ ಒದಗಿಸಿದ್ದು ಫೆ.22ರಂದು ಶಿವಮೊಗ್ಗದಲ್ಲಿ ಇದರ ಶಿಲಾನ್ಯಾಸವು ನಡೆಯಲಿದೆ.

ಬಹು ನಿರೀಕ್ಷೆಯ ಚಾರ್ಮಾಡಿ ಘಾಟಿ ರಸ್ತೆ ಹಾಗೂ ಉಜಿರೆ- ಧರ್ಮಸ್ಥಳ- ಪೆರಿಯಶಾಂತಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರಕಾರದ ರಸ್ತೆ, ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ  ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರುಗಳು, ಸಂಸದರುಗಳು, ಶಾಸಕರುಗಳು ಭಾಗಿಯಾಗಲಿದ್ದಾರೆ.

ಈ ಕಾಮಗಾರಿಯಿಂದ ಉಜಿರೆ- ಧರ್ಮಸ್ಥಳ- ಪೆರಿಯಶಾಂತಿ ರಸ್ತೆ ಸುಮಾರು 28.50ಕಿ.ಮೀ ರಸ್ತೆಯು 614ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆಯಾಗಿ ಅಭಿವೃದ್ಧಿ ಹೊಂದಲಿದೆ. ಚಾರ್ಮಾಡಿ ಘಾಟಿಯಲ್ಲಿ, ಚಾರ್ಮಾಡಿಯಿಂದ ದ.ಕ ಜಿಲ್ಲೆಯ ಗಡಿಯವರೆಗೆ 11ಕಿ.ಮೀ ರಸ್ತೆ 344ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಜೊತೆಗೆ ಇದೇ ಹೆದ್ದಾರಿಯ ಮೂಡಿಗೆರೆಯಿಂದ ಚಿಕ್ಕಮಗಳೂರಿನವರೆಗೆ 27ಕಿ.ಮೀ ರಸ್ತೆ 400ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಅಲ್ಲದೆ ರಾಜ್ಯದ ಒಟ್ಟು 300ಕಿ.ಮೀ ರಸ್ತೆ 6,200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಈಗಾಗಲೇ ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ.

error: Content is protected !!