ಬೆಳ್ತಂಗಡಿ: ಬಜೆಟ್ ಭಾಷಣದ ನೆಪದಲ್ಲಿ ಶಾಸನ ಸಭೆಯನ್ನು ಮುಖ್ಯಮಂತ್ರಿ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಸಾಮಾಧಾನ ಹೊರ ಹಾಕಿದ್ದಲ್ಲದೇ 2024-25ನೇ ಸಾಲಿನ ಮುಂಗಡ ಪತ್ರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕಳೆದ 9 ತಿಂಗಳಲ್ಲಿ ಕರ್ನಾಟಕ ರಾಜ್ಯವನ್ನು ಆರ್ಥಿಕವಾಗಿ ಆದೋಗತಿಗೆ ತಳ್ಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಗಡ ಪತ್ರ ಮಂಡಿಸುವ ಸಮಯದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಲೆಂದೇ ಸದನದ ವೇದಿಕೆಯನ್ನು ದುರುಪಯೋಗಪಡಿಸಿಕೊಂಡು ತಮ್ಮ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ. ಅಂದಾಜು ಏಳು ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದ ಜನತೆಗೆ ಸಮಾನವಾಗಿ ಕೊಡುಗೆ ನೀಡಬೇಕಾಗಿದ್ದ ಸರ್ಕಾರ ಇಲ್ಲಿ ಅಲ್ಪ ಸಂಖ್ಯಾತರನ್ನು ತುಷ್ಟೀಕರಿಸಲು ಬಹುಪಾಲು ಅನುದಾನ ಅವರಿಗೆ ಮೀಸಲಿರಿಸಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಕರಾವಳಿ ಜಿಲ್ಲೆಯ ಜನತೆಗೆ ಏನೂ ಉಪಯೋಗವಾಗದ ಮುಂಗಡ ಪತ್ರವಾಗಿದ್ದು ಹಳದಿ ರೋಗದಿಂದ ಸಂಕಷ್ಟಗೊಳಗಾದ ಅಡಿಕೆ ಬೆಳೆಗಾರರಿಗೆ ಪರಿಹಾರ ನಿರೀಕ್ಷೆ ಹುಸಿಯಾಗಿದೆ. ನೀರಾವರಿ, ಶಿಕ್ಷಣ ಇಲಾಖೆಗಳನ್ನು ಕಡೆಗಣಿಸಲಾಗಿದ್ದು ಎಲ್ಲಕ್ಕಿಂತ ಮಿಗಿಲಾಗಿ ಮೂಲ ಸೌಕರ್ಯವಲಯ ಕುಂಠಿತವಾಗುವ ಲಕ್ಷಣಗಳಿವೆ. 52 ಸಾವಿರ ಕೋಟಿ ಗ್ಯಾರಂಟಿ ಯೋಜನೆಗೆ ಮೀಸಲಿಡುವ ಸರ್ಕಸ್‍ನಿಂದಾಗಿ ರಾಜಸ್ವ ಕೊರತೆ ವಿತ್ತೀಯ ಕೊರತೆ ಅಪಾಯ ಮಟ್ಟವನ್ನು ದಾಟಿ ರಾಜ್ಯದ ಆರ್ಥಿಕ ಸ್ಥಿತಿ ಹದೆಗೆಡುವ ಕಳವಳವನ್ನು ಶಾಸಕ ಹರೀಶ್ ಪೂಂಜ ವ್ಯಕ್ತಪಡಿಸಿದ್ದಾರೆ.