ಲೋಕಸಭಾ ಚುನಾವಣೆ ಮೊದಲೇ ಸಿಎಎ ಕಾಯ್ದೆ ಜಾರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ:

 

 

ದೆಹಲಿ :ಮುಂದಿನ ಲೋಕಸಭಾ ಚುನಾವಣೆ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಅಧಿಸೂಚನೆ ಹೊರಡಿಸಿ ಜಾರಿಗೊಳಿಸಲಾಗುವುದು. ಇದರ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದಾರೆ.  ಅವರು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

2019ರ ಡಿಸೆಂಬರ್​ನಲ್ಲಿ ಸಿಎಎ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿದೆ. ಆದರೆ, ಅದನ್ನು ಜಾರಿ ಮಾಡಿಲ್ಲ. ಇತ್ತೀಚಿಗೆ ಬಿಜೆಪಿ ಸಂಸದರೊಬ್ಬರು ಸಿಎಎ ಬಗ್ಗೆ ಹೇಳಿಕೆ ನೀಡಿದ್ದರು. ಹೀಗಾಗಿ ಇದರ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಮಿತ್​ ಶಾ, ಸಿಎಎ ದೇಶದ ಕಾಯ್ದೆ. ಅದರ ಬಗ್ಗೆ ಖಂಡಿತವಾಗಿ ಅಧಿಸೂಚನೆ ಹೊರಡಿಸಲಾಗುವುದು. ಇದನ್ನು ಚುನಾವಣೆಯ ಪೂರ್ವದಲ್ಲೇ ಮಾಡಲಾಗುವುದು. ಸಿಎಎ ಜಾರಿಗೆ ಬರಲಿದೆ ಮತ್ತು ಅದರ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ಸಿಎಎ ಕಾಂಗ್ರೆಸ್ ಸರ್ಕಾರದ ಭರವಸೆಯಾಗಿತ್ತು. ಆದರೆ, ಸಿಎಎ ಜಾರಿಗೊಳಿಸುವ ಭರವಸೆಯಿಂದ ಕಾಂಗ್ರೆಸ್ ಹಿಂದೆ ಸರಿಯುತ್ತಿದೆ ಎಂದು ಆರೋಪಿಸಿದ ಗೃಹ ಸಚಿವರು, ದೇಶ ವಿಭಜನೆಯಾದಾಗ ಮತ್ತು ಆ ದೇಶಗಳಲ್ಲಿ ಶೋಷಣೆಗೊಳಗಾದ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಭಾರತಕ್ಕೆ ಸ್ವಾಗತವಿದೆ. ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು ಎಂದು ಹೇಳಿದರು.

ಭಾರತೀಯ ಪೌರತ್ವವನ್ನು ಒದಗಿಸಲು ಸಿಎಎಯನ್ನು ತರಲಾಗಿದೆಯೇ ಹೊರತು, ಯಾರ ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ ಎಂದು ಪ್ರತಿಪಾದಿಸಿದ ಅಮಿತ್​ ಶಾ, ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಈ ಕಾಯ್ದೆಯಲ್ಲಿ ಯಾವುದೇ ನಿಬಂಧನೆ ಇಲ್ಲದ ಕಾರಣ ಸಿಎಎ ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಈ ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಶೋಷಣೆಗೊಳಗಾದ ನಿರಾಶ್ರಿತರಿಗೆ ಪೌರತ್ವವನ್ನು ನೀಡುವ ಕಾಯ್ದೆ ಎಂದು ತಿಳಿಸಿದರು.

ಮೋದಿ ಸರ್ಕಾರವು ಪರಿಚಯಿಸಿರುವ ಸಿಎಎ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ಆಗಮಿಸಿದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು, ಕ್ರಿಶ್ಚಿಯನ್ನರು ಸೇರಿದಂತೆ ಶೋಷಣೆಗೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುವ ಗುರಿಯನ್ನು ಹೊಂದಿದೆ.

error: Content is protected !!