ಕೋಳಿ ಎಂದು ಭಾವಿಸಿ ವಿಷದ ಬಾಟಲ್ ನುಂಗಿದ ನಾಗರ ಹಾವು: ಪ್ರಾಣಾಪಾಯದಲ್ಲಿದ್ದ ಹಾವನ್ನು ರಕ್ಷಿಸಿದ ಉರಗ ತಜ್ಞ ಗುರುರಾಜ್ ಸನಿಲ್

ಕಾರ್ಕಳ: ಕೋಳಿ ಎಂದು ಭಾವಿಸಿ ನಾಗರ ಹಾವು ವಿಷದ ಬಾಟಲ್ ನುಂಗಿದ ಘಟನೆ ಕಾರ್ಕಳ ತಾಲೂಕಿನ ನೀರೆ ಬೈಲೂರು ಎಂಬಲ್ಲಿ ಫೆ.6ರಂದು ರಾತ್ರಿ ನಡೆದಿದೆ.

ಮನೆಯ ಹಟ್ಟಿಯನ್ನು ಹೊಕ್ಕ ನಾಗರ ಹಾವು ಮೊದಲು ಕೋಳಿಯೊಂದನ್ನು ಕಚ್ಚಿ ಸಾಯಿಸಿ, ಬಳಿಕ ಪಕ್ಕದಲ್ಲಿ ಬಿದ್ದಿದ್ದ ವಿಷದ ಬಾಟಲ್ ನ್ನು ನುಂಗಲು ಯತ್ನಿಸಿದೆ. ಹಾವನ್ನು ನೋಡಿದ ಜಗದೀಶ್ ನೀರೆ ಎಂಬವರು ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಗುರುರಾಜ್ ಸನಿಲ್ ಶೌಚಾಲಯದೊಳಗಿನ ಹೆಗ್ಗಣದ ಬಿಲಕ್ಕೆ ನುಗ್ಗಿದ ಹಾವನ್ನು ಹೊರತೆಗೆಯಲು ಹರಸಾಹಸ ಪಟ್ಟಿದ್ದಾರೆ. ಬಳಿಕ ಅದರ ಹೊಟ್ಟೆ ಸೇರಿದ್ದ ವಿಷದ ಬಾಟಲಿಯನ್ನು ತಳ್ಳುತ್ತ ಬಂದು ವಾಂತಿ ಮಾಡಿಸಿ ಹೊರಗೆ ತೆಗೆಯಲಾಯಿತು. ಪ್ರಾಣಾಪಾಯದಿಂದ ಪಾರಾದ ಹಾವನ್ನು ಅಲ್ಲೇ ಸಮೀಪದ ಹಾಡಿಯಲ್ಲಿ ಬಿಡಲಾಯಿತು.

ಈ ಬಗ್ಗೆ ಮಾತನಾಡಿದ ಉರಗ ತಜ್ಞ ಗುರುರಾಜ್ ಸನಿಲ್, ಹಾವುಗಳಿಗೆ ಮನುಷ್ಯರ ಹಾಗೆ ಯಾವುದೇ ಜೀವಿ ಅಥವಾ ವಸ್ತುಗಳನ್ನು ನಿಖರವಾಗಿ ಗುರುತಿಸುವ ದೃಷ್ಟಿ ವ್ಯವಸ್ಥೆ ಇರುವುದಿಲ್ಲ. ಅಲ್ಲದೆ ಪ್ರಾಣಿಗಳಂತೆ ಮೂಗಿನ ಮೂಲಕ ವಾಸನೆಯನ್ನು ಗ್ರಹಿಸಿ ಪತ್ತೆ ಹಚ್ಚುವ ಶಕ್ತಿಯೂ ಅವುಗಳಿಗಿಲ್ಲ. ಅವುಗಳ ಕಣ್ಣಗಳು ಜೀವಿಗಳ ಅಥವಾ ವಸ್ತುಗಳ ಓಡಾಟದ ಚಲನೆಯನ್ನು ಮಾತ್ರವೇ ಗ್ರಹಿಸಬಲ್ಲವು. ಉಳಿದಂತೆ ಅವುಗಳಿಗೆ ಸುತ್ತಲಿನ ಎಲ್ಲಾ ಆಗುಹೋಗುಗಳನ್ನು ತಿಳಿದುಕೊಳ್ಳಲು ಕೇವಲ ಸೀಳು ನಾಲಗೆಯೇ ಮುಖ್ಯ ಅಂಗವಾಗಿದೆ. ಹೀಗಾಗಿ ವಿಷದ ಬಾಟಲ್‌ನ್ನು ಕೋಳಿ ಎಂದು ಭಾವಿಸಿ ಹಾವು ನುಂಗಲು ಯತ್ನಿಸಿದೆ ಎಂದಿದ್ದಾರೆ.

error: Content is protected !!