ಬೆಂಗಳೂರು: ರಾಜ್ಯದ ಸಹಕಾರಿ ಸಂಸ್ಥೆಗಳ ಮೂಲಕ ಸಾಲ ಪಡೆದು 2023 ರ ಡಿ.31ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಅಸಲು ಪಾವತಿಸಿದಲ್ಲಿ ಅದರ ಮೇಲಿನ ಬಡ್ಡಿ ಮನ್ನಾ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ
ಬಡ್ಡಿ ಮನ್ನಾ ವಿಚಾರ ಘೋಷಣೆ ಮಾಡಿದ್ದರು. ಇದೀಗ ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದೆ. ರೈತರು ರಾಜ್ಯದ ಸಹಕಾರ ಸಂಘಗಳಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು 2023 ರ 31ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಕಂತುಗಳ ಅಸಲನ್ನು ಫೆ.29, 2024 ರೊಳಗೆ ಸಂಬಂಧಪಟ್ಟ ಪತ್ತಿನ ಸಹಕಾರ ಸಂಘ/ಬ್ಯಾಂಕುಗಳಿಗೆ ಪೂರ್ತಿಯಾಗಿ ಮರುಪಾವತಿಸಿದಲ್ಲಿ ಈ ಮೊತ್ತಕ್ಕೆ ಬಾಕಿ ಇರುವ ಬಡ್ಡಿಯನ್ನು ಮನ್ನಾ ಮಾಡಲು ಮಂಜೂರಾತಿ ನೀಡಲಾಗಿದೆ.
ಬಡ್ಡಿ ಮನ್ನಾಗೆ ಷರತ್ತುಗಳೇನು?:
ಈ ಸೌಲಭ್ಯ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ದಿನಾಂಕ:31.12.2023ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.
ಈ ಯೋಜನೆ ಕೃಷಿಯೇತರ ಸಾಲಗಳಿಗೆ ಅನ್ವಯವಾಗುವುದಿಲ್ಲ ಮತ್ತು ಮೇಲೆ ತಿಳಿಸಿರುವ ಸಂಸ್ಥೆಗಳನ್ನು ಹೊರತುಪಡಿಸಿ ಇತರೆ ಸಹಕಾರ ಸಂಸ್ಥೆಗಳಲ್ಲಿ ಪಡೆದ ಸಾಲಗಳಿಗೆ ಅನ್ವಯಿಸುವುದಿಲ್ಲ. ನಬಾರ್ಡ್ ಗುರುತಿಸಿದ ಕೃಷಿ / ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಅಂದರೆ ಲಘು ನೀರಾವರಿ, ಭೂ ಅಭಿವೃದ್ಧಿ, ಸಾವಯವ ಕೃಷಿ, ಪಶುಸಂಗೋಪನೆ ಹಾಗೂ ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಕೃಷಿ ಯಾಂತ್ರೀಕರಣ, ಪ್ಲಾಂಟೇಷನ್ ಹಾಗೂ ತೋಟಗಾರಿಕೆ ಅಭಿವೃದ್ಧಿ ಉದ್ದೇಶಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಮುಂದುವರೆದು, ರಾಜ್ಯ ಸರ್ಕಾರದ ಬಡ್ಡಿ ರಿಯಾಯತಿ ಬದ್ಧತೆಯಡಿ ವಿತರಿಸಿರುವ ಕೃಷಿ / ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.ಕೃಷಿ ಪತ್ತಿನ ಸಹಕಾರ ಸಂಘ/ಬ್ಯಾಂಕುಗಳಿಂದ ಪಡೆದು 31.12.2023 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಅಸಲನ್ನು 29.02.2024 ರೊಳಗೆ ಸಂಬಂಧಪಟ್ಟ ಸಂಸ್ಥೆಗಳಿಗೆ ಸಾಲ ಪಡೆದ ರೈತರು ಮರುಪಾವತಿ ಮಾಡಿದಲ್ಲಿ ಸದರಿ ಸಾಲಗಳ ಮೇಲಿನ ಮರುಪಾವತಿ ದಿನಾಂಕದವರೆಗಿನ ಬಡ್ಡಿಯನ್ನು ಮನ್ನಾ ಮಾಡಿ ಸಂಬಂಧಪಟ್ಟ ಸಹಕಾರಿ ಸಂಸ್ಥೆಗಳಿಗೆ ಸರ್ಕಾರ ಭರ್ತಿ ಮಾಡುವುದು. ಈ ಯೋಜನೆಯು ಮಾರಿಟೋರಿಯಂ ಅವಧಿಯಲ್ಲಿ ಸುಸ್ತಿಯಾಗಿರುವ ಬಡ್ಡಿಗೂ ಸಹ ಅನ್ವಯವಾಗುತ್ತದೆ.ಯೋಜನೆಯಡಿಯಲ್ಲಿ ಪ್ರಾಥಮಿಕ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕು (ಪಿಕಾರ್ಡ್) ಗಳಿಗೆ ರೈತರು ಮರುಪಾವತಿಸುವ ಸುಸ್ತಿ ಸಾಲದ ಅಸಲು 01.04.2004 ಕ್ಕಿಂತ ಹಿಂದಿನ ಅವಧಿಯ ಸಾಲವಾಗಿದ್ದರೆ, ಬಡ್ಡಿ ಪಾವತಿಸಲು ಬಾಕಿ ಇದ್ದ ದಿನಾಂಕದಿಂದ ಸಾಲ ಮರುಪಾವತಿ ದಿನಾಂಕದವರೆಗೆ ಸಾಲಗಳಿಗೆ ನಿಗದಿಮಾಡಲಾಗಿರುವ ಬಡ್ಡಿ, ದರ ಅಥವಾ ಶೇ.12 ರ ಬಡ್ಡಿದರ ಇದರಲ್ಲಿ ಯಾವುದು ಕಡಿಮೆಯೋ ಅಂತಹ ಬಡ್ಡಿ ಆಧಾರದಲ್ಲಿ ಸಹಕಾರ ಸಂಘಗಳಿಗೆ ಸರ್ಕಾರದ ವತಿಯಿಂದ ಬಡ್ಡಿ ಸಹಾಯಧನವನ್ನು ಭರಿಸಲಾಗುವುದು.1.04.2004ರ ನಂತರದಲ್ಲಿನ ಸಾಲಗಳಿಗೆ ಆಯಾ ವರ್ಷದಲ್ಲಿ ರೈತರು ಪಾವತಿಸಬೇಕಾದ ಬಡ್ಡಿ ಮತ್ತು ಸರ್ಕಾರ ಪಾವತಿಸಬೇಕಾದ ಬಡ್ಡಿ ಸಹಾಯಧನದ ಒಟ್ಟು ಬಡ್ಡಿ ಅಥವಾ ಗರಿಷ್ಠ ಶೇ.12 ಇದರಲ್ಲಿ ಯಾವುದು ಕಡಿಮೆಯೋ ಆ ಬಡ್ಡಿಯನ್ನು ಸಂಬಂಧಿಸಿದ ಸಹಕಾರ ಸಂಸ್ಥೆಗಳಿಗೆ ಸರ್ಕಾರದಿಂದ ಭರಿಸಲಾಗುವುದು. ರೂ.10 ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ಸಾಮಾನ್ಯ ಬಡ್ಡಿ ದರದಲ್ಲಿ ವಿತರಿಸಿದರೂ ಸಹ ಆಯಾ ವರ್ಷದಲ್ಲಿ ರೂ.10 ಲಕ್ಷಗಳವರೆಗೆ ನಿಗದಿಪಡಿಸಿದ ಬಡ್ಡಿ ದರದನ್ವಯ ಬಡ್ಡಿ ಮನ್ನಾ ಮೊತ್ತ ಕ್ಲೇಮ್ ಮಾಡಬೇಕು ಈ ಯೋಜನೆಯಲ್ಲಿ ಮರುಪಾವತಿಸುವ ಸಾಲಗಳಿಗೆ ಯಾವುದೇ ಸುಸ್ತಿ ಬಡ್ಡಿ, ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬಡ್ಡಿ, ವಸೂಲಿ ವೆಚ್ಚ (Recovery Charges) ಹಾಗೂ ಇತರೆ ವೆಚ್ಚಗಳನ್ನು ಸಹಕಾರ ಸಂಸ್ಥೆಗಳು ಕ್ಲೇಮ್ ಮಾಡುವಂತಿಲ್ಲ.