ಚಿತ್ರದುರ್ಗ: ಸೂಟ್‌ಕೇಸ್‌ನಲ್ಲಿ 4 ವರ್ಷದ ಮಗುವಿನ ಶವ ಇಟ್ಟುಕೊಂಡು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರನ್ನು ಐಮಂಗಲ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸ್ಟಾರ್ಟ್ಅಪ್ ಫೌಂಡರ್ ಹಾಗೂ ಸಿಇಒ ಸುಚನಾ ಸೇಠ್ ಕಳೆದ ಶನಿವಾರ ತಮ್ಮ 4 ವರ್ಷದ ಮಗನನ್ನು ಗೋವಾದ ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದರು. ಸೋಮವಾರ ಬೆಳಗ್ಗೆ ಅಲ್ಲಿನ ರೂಂ ಖಾಲಿ ಮಾಡಿ ಟ್ಯಾಕ್ಸಿಯಲ್ಲಿ ಕರ್ನಾಟಕಕ್ಕೆ ಹೊರಟಿದ್ದರು. ಬಳಿಕ ಕೊಠಡಿಯನ್ನು ಸ್ವಚ್ಛಗೊಳಿಸಲು ಹೋದ ಸಿಬ್ಬಂದಿಗೆ ಅಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಅನುಮಾನಗೊಂಡಿದ್ದಾರೆ. ಸಿಬ್ಬಂದಿ, ಹೋಟೆಲ್ ಮ್ಯಾನೇಜ್‌ಮೆಂಟ್‌ಗೆ ಮಾಹಿತಿ ನೀಡಿದ್ದು, ಹೋಟೆಲ್ ಆಡಳಿತ ಮಂಡಳಿ ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು ಸುಚನಾ ಸೇಠ್ ಹೋಟೆಲ್‌ಗೆ ಆಗಮಿಸಿದಾಗ ಮಗನೂ ಜೊತೆಗಿದ್ದು, ಹೋಟೆಲ್‌ನಿಂದ ಹೊರಡುವಾಗ ಒಬ್ಬರೇ ಹೊರಡಿರುವುದನ್ನು ಗಮನಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ತಕ್ಷಣ ಸುಚನಾ ಸೇಠ್ ಪ್ರಯಾಣಿಸುತ್ತಿದ್ದ ಟ್ಯಾಕ್ಸಿ ಡ್ರೈವರ್ ಗೆ ಕರೆ ಮಾಡಿ, ಸುಚನಾ ಸೇಠ್ ಜೊತೆ ಮಾತನಾಡಿದ್ದಾರೆ. ಆದರೆ ಸುಚನಾ ತಮ್ಮ ಮಗನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋಗಿರುವುದಾಗಿ ಸುಳ್ಳು ಹೇಳಿದ್ದಾರೆ.
ನಂತರ ಪೊಲೀಸರು ವಿಳಾಸ ನೀಡುವಂತೆ ಹೇಳಿದ್ದು, ಸುಚನಾ ನೀಡಿದ ಸಂಬಂಧಿಕರ ವಿಳಾಸವನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆ ವಿಳಾಸ ನಕಲಿ ಎನ್ನುವುದು ಪತ್ತೆಯಾದಾಗ ಪೊಲೀಸರ ಅನುಮಾನ ಮತ್ತಷ್ಟು ಬಲವಾಗಿದೆ. ಕೂಡಲೇ ಗೋವಾ ಪೊಲೀಸರು ಈ ಬಗ್ಗೆ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಅದೇ ಸಮಯಕ್ಕೆ ಟ್ಯಾಕ್ಸಿ ಚಾಲಕನನ್ನೂ ಸಂಪರ್ಕಿಸಲಾಗಿದೆ. ಸುಚನಾ ಸೇಠ್‌ಗೆ ಅನುಮಾನ ಬಾರದಂತೆ ಹತ್ತಿರದಲ್ಲಿ ಪೊಲೀಸ್ ಠಾಣೆ ಕಂಡಲ್ಲಿ ಅಲ್ಲಿಗೆ ಕರೆದುಕೊಂಡು ಹೋಗುವಂತೆ ಟ್ಯಾಕ್ಸಿ ಚಾಲಕನಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಅದರಂತೆ ಟ್ಯಾಕ್ಸಿ ಚಾಲಕ ಗೋವಾದಿಂದ ಬೆಂಗಳೂರಿಗೆ ಹೋಗುವ ಹೈವೇ 4ರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾನೆ. ಆಕೆಯನ್ನು ಬಂಧಿಸಿದ ಐಮಂಗಲ ಠಾಣಾ ಪೊಲೀಸರು, ಕಾರಿನ ಡಿಕ್ಕಿಯಲ್ಲಿದ್ದ ಸೂಟ್‌ಕೇಸ್ ಅನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸೂಟ್‌ಕೇಸ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ.
ಗೋವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಸುಚನಾ ಸೇಠ್ ಅವರನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.