ಯುಎಇ ಕರೆನ್ಸಿಯ ಕಲರ್ ಜೆರಾಕ್ಸ್ ಕಾಪಿ ಕೊಟ್ಟು ವಂಚನೆ: ಸಿಸಿಬಿ ಪೊಲೀಸ್ ಬಲೆಗೆ ಬಿದ್ದ ಆರೋಪಿ ಇಮ್ರಾನ್ ಶೇಕ್: ನಕಲಿ ಕರೆನ್ಸಿಯೊಂದಿಗೆ ರುಕ್ಸಾನ ಪರಾರಿ..!

ಬೆಂಗಳೂರು: ವಿದೇಶ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರನ್ನ ಪರಿಚಯ ಮಾಡಿಕೊಂಡು ಯುಎಇ ಕರೆನ್ಸಿಯ ಕಲರ್ ಜೆರಾಕ್ಸ್ ಕಾಪಿ ಕೊಟ್ಟು ವಂಚಿಸುತ್ತಿದ್ದವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಮೂಲದ ಇಮ್ರಾನ್ ಶೇಕ್ ಹಾಗೂ ಪಶ್ಚಿಮ ಬಂಗಾಳ ಮೂಲದ ರುಕ್ಸಾನ ಎಂಬವರು ತಮ್ಮ ಬಳಿ ಸಾಕಷ್ಟು ಯುಎಇ ಕರೆನ್ಸಿ ಇದೆ, ಆದರೆ ಎಲ್ಲವನ್ನೂ ಎಕ್ಸ್ಚೇಂಜ್ ಮಾಡಲು ಸಾಧ್ಯವಿಲ್ಲವಾದ್ದರಿಂದ ಮಾರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿ, ವಿದೇಶ ಪ್ರವಾಸಕ್ಕೆ ಸಿದ್ಧರಾಗಿದ್ದವರಿಗೆ ಕಲರ್ ಜೆರಾಕ್ಸ್ ಕಾಪಿ ನೀಡಿ ವಂಚಿಸಿದ್ದಾರೆ.

ಭಾರತೀಯ ಕರೆನ್ಸಿಯಲ್ಲಿ ಯುಎಇನ ಒಂದು ದಿರ್ಹಾಮ್ ಬೆಲೆ ಸರಿಸುಮಾರು 22 ರೂಪಾಯಿ. ಆದರೆ ಇವರು 12 ರೂಪಾಯಿಯಂತೆ ಎಕ್ಸ್ಚೇಂಜ್ ಮಾಡುತ್ತಿದ್ದು ಮೊದಲಿಗೆ ಒಂದು ಅಸಲಿ ದಿರ್ಹಾಮ್ ಕೊಟ್ಟು ಕಳಿಸುತ್ತಿದ್ದರು. ಬಳಿಕ ಹಣ ಪಡೆದವರು ಅಧಿಕೃತ ಮನಿ ಎಕ್ಸ್ಚೇಂಜ್ ಸೆಂಟರಿನಲ್ಲಿ ಪರಿಶೀಲಿಸಿದಾಗ ಅಸಲಿ ಎಂದು ತಿಳಿಯುತ್ತಿದ್ದಂತೆ ಒಂದಷ್ಟು ಹಣ ಸಿದ್ಧಮಾಡಿಕೊಂಡು ಇಮ್ರಾನ್‌ನನ್ನು ಭೇಟಿ ಮಾಡುತ್ತಿದ್ದರು. ಹಣ ಪಡೆಯುತ್ತಿದ್ದ ಇಮ್ರಾನ್, ಕಲರ್ ಜೆರಾಕ್ಸ್ ನೋಟುಗಳನ್ನು ಗ್ರಾಹಕರ ಕೈಗಿಟ್ಟು ಪರಾರಿಯಾಗುತ್ತಿದ್ದ.

ಪ್ರಕರಣ ಬೆನ್ನತ್ತಿರುವ ಸಿಸಿಬಿ ಪೊಲೀಸರು, ಆರೋಪಿ ಇಮ್ರಾನ್ ಶೇಕ್‌ನನ್ನು ಬಂಧಿಸಿ, ಆತನಿಂದ ಸುಮಾರು 100ಕ್ಕೂ ಹೆಚ್ಚು ನಕಲಿ ಯುಎಇ ದಿರ್ಹಾಮ್ ಅನ್ನು ವಶಕ್ಕೆ ಪಡೆದಿದ್ದಾರೆ. ಆದರೆ ರುಕ್ಸಾನ ಮತ್ತಷ್ಟು ನಕಲಿ ಕರೆನ್ಸಿಯೊಂದಿಗೆ ಪರಾರಿಯಾಗಿದ್ದು ಆಕೆಯ ಪತ್ತೆಗೂ ಬಲೆ ಬೀಸಲಾಗಿದೆ.

error: Content is protected !!