ಬೆಳ್ತಂಗಡಿ:ಪಾಂಗಳ ನಿವಾಸಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಒಳಗಾಗಿ ಹತ್ಯೆಯಾಗಿ ವರುಷ 12 ಕಳೆದರೂ ಸಾವಿಗೆ ನ್ಯಾಯ ಸಿಗಲಿಲ್ಲ.ಈ ಪ್ರಕರಣವನ್ನು ಕೇಂದ್ರ ಮತ್ತು ರಾಜ್ಯ ಸರಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಿ ಈ ಪ್ರಕರಣವನ್ನು ಮರು ತನಿಖೆಗೆ ನಡೆಸಬೇಕು. ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಪ್ರಜಾಪ್ರಭುತ್ವ ವೇದಿಕೆ ವತಿಯಿಂದ, ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಬೃಹತ್ ಜನಾಂದೋಲನ ಸಭೆ ಡಿ.03ರಂದು ಮಧ್ಯಾಹ್ನ 2.30 ಗಂಟೆಯಿಂದ ಉಜಿರೆ ಚಾರ್ಮಾಡಿ ರಸ್ತೆಯ ಅನುಗ್ರಹ ಶಾಲಾ ಬಳಿ ನಡೆಯಲಿದೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಅಂತರ ಹೇಳಿದರು.ಅವರು
ನ.28 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸಭೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟನವರ್, ತುಳುನಾಡ ದೈವರಾಧನೆ ವಿಮರ್ಶಕ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ,ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ ಗೌಡ, ಹೈ ಕೋರ್ಟ್ ವಕೀಲ ಮೋಹಿತ್ ಕುಮಾರ್, ಒಡನಾಡಿ ಸೇವಾ ಸಂಸ್ಥೆಯ ಎಂ.ಎಲ್.ಪರಶುರಾಮು ಭಾಗವಹಿಸಲಿದ್ದಾರೆ. ವಿಶೇಷವಾಗಿ ಈ ಪ್ರಕರಣದ ಕುರಿತು ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ರಕ್ತದ ಸಹಿಯ ಮನವಿಯನ್ನು ಸಲ್ಲಿಸಲಾಗುವುದು. ಸುಮಾರು 15 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಗೌರವಧ್ಯಕ್ಷ ಹರೀಶ್ ಕುಮಾರ್ ಬರಮೇಲು, ತಾಲೂಕು ಸಂಚಾಲಕ ಮನೋಜ್ ಕುಂಜರ್ಪ ಮತ್ತು ಪ್ರಜ್ವಲ್ ಉಪಸ್ಥಿತರಿದ್ದರು.