ಬೆಳ್ತಂಗಡಿ: ಧರ್ಮಸ್ಥಳದ ಗೌರವ ರಕ್ಷಣೆಯ ನೆಪವನ್ನು ಮುಂದಿಟ್ಟು ಸೌಜನ್ಯ ಪರ ಹೋರಾಟದ ವಿರೋಧಿಗಳು “ಧರ್ಮ ಸಂರಕ್ಷಣಾ ಸಭೆ” ಯ ಹೆಸರಿನಲ್ಲಿ ಸೌಜನ್ಯ ತಾಯಿ, ಸಹೋದರಿಯರು, ಸೌಜನ್ಯ ಪರ ಹೋರಾಟದಲ್ಲಿರುವ ಪ್ರಮುಖರು, ಬೆಳ್ತಂಗಡಿ, ಉಜಿರೆ ಗ್ರಾಮ ಸೇರಿದಂತೆ ಬೆಳ್ತಂಗಡಿ ತಾಲೂಕಿನ ನಾಗರಿಕರ, ಮಹಿಳೆಯರ ತೇಜೋವದೆ, ಅಸಭ್ಯ, ಅಶ್ಲೀಲ ಭಾಷೆ ಬಳಸಿ ನಿಂದನೆಯಲ್ಲಿ ತೊಡಗಿರುವುದು ಕಾರ್ಕಳ ಸಭೆಯಲ್ಲಿ ಸಾಬೀತಾಗಿದೆ. ಇದು ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿದೆ. ಅಕ್ಟೋಬರ್ 29 ರಂದು ಉಜಿರೆ, ಧರ್ಮಸ್ಥಳದಲ್ಲಿ ಇದೇ ತಂಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ರೀತಿಯ ದ್ವೇಷ, ಹಿಂಸೆಗೆ ಪ್ರಚೋದನೆ ಕೊಡುವ, ಧರ್ಮದ ಗೌರವ ಬೀದಿಪಾಲು ಮಾಡುತ್ತಾ ಹಿಂದು ಧರ್ಮದೊಳಗೆ ಪರಸ್ಪರ ಕಚ್ಚಾಟ ತರಿಸುವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನೀಡಬಾರದು ಎಂದು ಸಿಪಿಐಎಂ ಮುಖಂಡ ಬಿ.ಎಂ ಭಟ್ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಆ 24 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗಾಗಿ ರಾಜ್ಯಾದ್ಯಂತ ಜನತೆ ಆಗ್ರಹಿಸುತ್ತಿದ್ದಾರೆ. ಸೌಜನ್ಯ ತಾಯಿ, ಸೋದರಿಯರ ಸಹಿತ ಕುಟುಂಬ ನಡೆಸುತ್ತಿರುವ ಹೋರಾಟಕ್ಕೆ ಸಿಪಿಐಎಂ ಸಹಿತ ಹಲವು ಸಂಘಟನೆಗಳು, ಹೋರಾಟಗಾರರು, ಗಣ್ಯರು ನಿಂತಿದ್ದಾರೆ. ಇಂತಹ ಮಹತ್ವದ ಹೋರಾಟವನ್ನು ದಿಕ್ಕು ತಪ್ಪಿಸಲು, ನೈಜ ಕೊಲೆಗಾರರ ರಕ್ಷಣೆಗೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಯತ್ನಿಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಅಂತಹ ಎಲ್ಲಾ ಹಿತಾಸಕ್ತಿಗಳು ಒಂದಾಗಿ ಈಗ “ಧರ್ಮ ಸಂರಕ್ಷಣಾ ರ್ಯಾಲಿ” ಗಳನ್ನು ಸಂಘಟಿಸುತ್ತಿದ್ದು, ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸುತ್ತಿರುವ ಕುಟುಂಬ, ಹೋರಾಟಗಾರರು ಹಾಗೂ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿರುವ ಬೆಳ್ತಂಗಡಿ ತಾಲೂಕಿನ ಜನತೆಯನ್ನು ಹಿಮ್ಮೆಟಿಸುವ, ದೃತಿಗೆಡಿಸುವ ಕೆಲಸದಲ್ಲಿ ತೊಡಗಿಕೊಂಡಿವೆ.
ಸೌಜನ್ಯಳAತಹ ಯುವತಿಗೆ ಆದ ಅನ್ಯಾಯ , ದೌರ್ಜನ್ಯದ ವಿರದ್ಧ ನ್ಯಾಯಕ್ಕಾಗಿ ಹಾಗೂ ಇದರಿಂದ ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಕ್ಕೆ ಆದ ಕಳಂಕದ ನಿವಾರಣೆಗೆ ನಿಜವಾದ ಆರೋಪಿಗಳ ಪತ್ತೆಗೆ ನಡೆಯುವ ಹೋರಾಟವೇ ನಿಜವಾದ ಧರ್ಮ ಸಂರಕ್ಷಣಾ ಮತ್ತು ಸಂವಿಧಾನ ಉಳಿವು ರಕ್ಷಣಾ ಹೋರಾಟ ಆಗುವುದೇ ವಿನಃ ಇದರ ವಿರುದ್ಧ ನಡೆಯುವ ಕಾರ್ಯಕ್ರಮ ಧರ್ಮ ವಿರೋಧಿ, ಸಂವಿದಾನ ವಿರೋಧಿ ಕಾರ್ಯಕ್ರಮವಾಗುತ್ತದೆ ಎಂದಿದೆ.
ಮುಂದುವರಿದು , ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಈ ತಂಡದ ಸಭೆಯಲ್ಲಿ ದೃಶ್ಯ ಮಾದ್ಯಮದ ವ್ಯಕ್ತಿ, ಹಾಗೂ ತಾನೊಬ್ಬ ಆರ್.ಎಸ್.ಎಸ್. ಮತ್ತು ಸಂಘ ಪರಿವಾರದ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಕೆಲವರು ಅತ್ಯಂತ ಕೆಟ್ಟ ಪದಗಳನ್ನು ಬಳಸಿ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಕುಟುಂಬದ ಹೆಣ್ಣು ಮಕ್ಕಳನ್ನು ನಿಂದಿಸಿರುತ್ತಾರೆ. ಚಾರಿತ್ರ್ಯ ವದೆಗೆ ಯತ್ನಿಸಿದ್ದಾರೆ. ಹೋರಾಟಗಾರ ಹೆಣ್ಣು ಮಕ್ಕಳನ್ನು ಲೈಂಗಿಕ ಕಾರ್ಯಕರ್ತೆಯರು ಎಂಬ ಪದಗಳನ್ನು ಬಳಸಿ ಬೆದರಿಕೆ ದಾಟಿಯ ಭಾಷಣ ಮಾಡಿರುತ್ತಾರೆ. ಹಾಗೆಯ ಹೋರಾಟದ ಮುಂಚೂಣಿಯಲ್ಲಿರುವ ಪ್ರಮುಖರ ಮೇಲೂ ಕೆಸರೆರಚುವ ಮಾತುಗಳನ್ನು ಕೆಟ್ಟ ಪದಗಳ ಮೂಲಕ ಮಾಡಲಾಗಿದೆ. ಈ ಭಾಷಣದ ಸಂದರ್ಭ ಮೋಹನ್ ಆಳ್ವ, ಕಾರ್ಕಳದ ಶಾಸಕರು, ಒಂದೆರಡು ಸ್ವಾಮೀಜಿಗಳ ಸಹಿತ ಹಲವಾರು ಜನ ಗಣ್ಯರೆನಿಸಿಕೊಂಡವರು ವೇದಿಕೆಯಲ್ಲಿ ಇದ್ದರು. ಯಾರಿಂದಲೂ ಇಂತಹ ಕೀಳು ಮಟ್ಟದ ದಾಳಿಗೆ ಆಕ್ಷೇಪ ಬರಲಿಲ್ಲ. ಇದು ನಾಗರಿಕರಲ್ಲಿ ಆತಂಕ, ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ ಎಂದಿದೆ.
ಅದೇ ರೀತಿ ಬೆಳ್ತಂಗಡಿ, ಉಜಿರೆ ಜನರು ಪಾಪಿಗಳು, ನಡತೆ ಕೆಟ್ಟವರು, ಕೃತಘ್ನರು, ಭಿಕ್ಷುಕರು ಎಂದೆಲ್ಲಾ ಅವಮಾನಿಸಿದ ಹಿಂದು ಧರ್ಮ ಸಂರಕ್ಷಣಾ ಸಭೆಯಲ್ಲಿ ಅನಾವಶ್ಯಕವಾಗಿ ಕಮ್ಯೂನಿಸ್ಟುನ್ನು, ಮುಸ್ಲಿಂರನ್ನು ಎಳೆದು ತಂದು ಟೀಕಿಸಲಾಗಿದೆ. ಕಾರ್ಕಳದ ಸಭೆಯ ಘಟನೆಗಳನ್ನು ಕಂಡಾಗ ಮುಂದಿನ ಇವರ “ಧರ್ಮ ಸಂರಕ್ಷಣಾ ಸಭೆ” ಗಳು ಮತ್ತಷ್ಟು ಅಕ್ರಮಣಕಾರಿಯಾಗಿ ನಡೆಯುವ, ದಾಳಿ, ಸಂಘರ್ಷಕ್ಕೆ ಪ್ರಚೋದನೆ ಕೊಡುವ ವ್ಯವಸ್ಥಿತ ಹುನ್ನಾರ ಅಡಗಿರುವಂತೆ ಕಾಣಿಸುತ್ತದೆ. ಆ ಮೂಲಕ ಸೌಜನ್ಯ ನ್ಯಾಯದ ಪರವಾದ ಹೋರಾಟವನ್ನು ಹತ್ತಿಕ್ಕುವ ಯತ್ನಗಳು ಇದರ ಹಿಂದೆ ಅಡಗಿರುವಂತಿದೆ. ಅಕ್ಟೋಬರ್ 29 ರಂದು ಉಜಿರೆ, ಧರ್ಮಸ್ಥಳದಲ್ಲಿ ನಡೆಯುವ ಸಭೆ ಕಾರ್ಕಳದ ಸಭೆಗಿಂತಲೂ ಹೆಚ್ಚು ಜನರನ್ನು ಸೇರಿಸುವ, ಸೌಜನ್ಯ ಕುಟುಂಬ, ಅವರ ಪರವಾಗಿರುವ ಬೆಳ್ತಂಗಡಿ ನಾಗರಿಕರ ವಿರುದ್ಧ ಹೆಚ್ಚು ಆಕ್ರಮಣಕಾರಿಯಾಗಿ ನಡೆಯುವ ಸಾಧ್ಯತೆ ಕಾಣಿಸುತ್ತದೆ. ಹಿಂಸೆಗೆ ಕುಮ್ಮಕ್ಕು ಕೊಡುವ ಸಾಧ್ಯತೆಯೂ ಎದ್ದು ಕಾಣಿಸುತ್ತಿದೆ. ಆದುದರಿಂದ ಇಂತಹ ಹಿನ್ನಲೆ, ಸಾಧ್ಯತೆಗಳನ್ನು ಪರಿಗಣಿಸಿ ಇಂತಹ ಅಧರ್ಮಿಗಳ ಕೂಟಕ್ಕೆ ಅಕ್ಟೋಬರ್ 29 ರ “ಧರ್ಮ ಸಂರಕ್ಷಣಾ ಸಭೆ” ಗೆ ಅವಕಾಶ ನೀಡಬಾರದು, ರಾಕೇಶ್ ಶೆಟ್ಟಿ, ವಸಂತ ಗಿಳಿಯಾರ್ ಸಹಿತ ಪ್ರಚೋದಕ ಶಕ್ತಿಗಳಿಗೆ ಅಂದು ಬೆಳ್ತಂಗಡಿ ತಾಲೂಕು ಪ್ರವೇಶಕ್ಕೆ ನಿರ್ಬಂಧ ಹೇರಬೇಕು. ಆ ಮೂಲಕ ಹಿಂದು ಧರ್ಮದ ಗೌರವ ಉಳಿಸುವ ಮತ್ತು ಸಂವಿಧಾನದ ರಕ್ಷಣೆಯ ಕೆಲಸ ಆಗಬೇಕು ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಜಯರಾಮ ಮಯ್ಯ, ಶ್ಯಾಮರಾಜ್, ಈಶ್ವರಿ ಪದ್ಮುಂಜ, ಧನಂಜಯ ಗೌಡ ಉಪಸ್ಥಿತರಿದ್ದರು.