ವೇಣೂರು: ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವ: ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ

ವೇಣೂರು : ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವ ಇದರ ಪೂರ್ವಭಾವಿಯಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಇವರ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು ಮತ್ತು ಇಲಾಖಾಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯು ಸೆ.11ರಂದು ವೇಣೂರು ಬಾಹುಬಲಿ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವೇಣೂರು ಸಂಪರ್ಕಿಸುವ ಎಲ್ಲ ರಸ್ತೆಗಳು ಹಾಗೂ ಬಾಹುಬಲಿ ಬೆಟ್ಟದ ಸುತ್ತಮುತ್ತಲಿನ ರಸ್ತೆ ಡಾಮರೀಕರಣ, ನೀರಿನ ವ್ಯವಸ್ಥೆ, ಸಮರ್ಪಕ ವಿದ್ಯುತ್ ವ್ಯವಸ್ಥೆ, ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆಯ ಬಗ್ಗೆ ಡಾ.ಪದ್ಮಪ್ರಸಾದ ಅಜಿಲರು ಪ್ರಸ್ತವಿಸಿದರು.

ಮೂಡಬಿದಿರೆಯ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಾತನಾಡಿ ಮಹಾಮಸ್ತಕಾಭಿಷೇಕದ ನೆನಪಿಗಾಗಿ ವೇಣೂರು ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯೊಂದನ್ನು ಮಾಡುವ ಮೂಲಕ ಸರ್ವಧರ್ಮಿಯರಿಗೂ ಸದುಪಯೋಗ ಆಗುವಂತಹ ಕಾರ್ಯ ನಡೆದರೆ ಮಹಾಮಸ್ತಕಾಭಿಷೇಕ ಮತ್ತಷ್ಟು ಅರ್ಥಪೂರ್ಣವಾಗುತ್ತದೆ ಈ ಬಗ್ಗೆಯೂ ಕ್ರಮಕೈಗೊಳ್ಳಬೇಕು ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ ಮಹಾಮಸ್ತಕಾಭಿಷೇಕಕ್ಕೆ ವಿವಿಧ ಕಡೆಗಳಿಂದ ಜನಸ್ತೋಮ ಹಾಗೂ ವಾಹನಗಳು ಹರಿದು ಬರಲಿದ್ದು ವಾಹನ ದಟ್ಟಣೆ ಕಡಿಮೆ ಗೊಳಿಸುವ ನಿಟ್ಟಿನಲ್ಲಿ ವೇಣೂರಿಗೆ ಸಂಪರ್ಕಿಸಲು ಬೈಪಾಸ್ ರಸ್ತೆಗಳನ್ನು ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇನ್ನೇನು ಕೆಲವೇ ತಿಂಗಳುಗಳು ಮಾತ್ರ ಮಸ್ತಕಾಭೀಷೇಕಕ್ಕೆ ಬಾಕಿ ಇರುವುದರಿಂದ ತಕ್ಷಣ ಅಧಿಕಾರಿಗಳ ಹಾಗೂ ಎಲ್ಲ ಜನಪ್ರತಿನಿಧಿಗಳ, ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಮುಖ್ಯ ಮಂತ್ರಿಗಳಿಗೆ ವರದಿ ಸಲ್ಲಿಸಲಾಗುವುದು ಹಾಗೂ ವಿಶೇಷ ಅನುದಾನದಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಇಂದ್ರ, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು

error: Content is protected !!