ಬೆಳ್ತಂಗಡಿ: ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣಕ್ಕೆಂದು ಮೀಸಲಾಗಿಟ್ಟ ಅನುದಾನವನ್ನು ಗ್ಯಾರಂಟಿ ಬಳಕೆ ಮಾಡುವುದರ ಮೂಲಕ ಕಾಂಗ್ರೆಸ್ ಅನ್ಯಾಯವೆಸಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣಕ್ಕೆಂದು ಮೀಸಲಾಗಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಬಳಕೆ ಮಾಡುವುದರ ಮೂಲಕ ಕಾಂಗ್ರೇಸ್ ಪಕ್ಷ ರಾಜಕೀಯ ಹಿತಾಸಕ್ತಿಗಳಿಗೋಸ್ಕರ ಇನ್ನೊಬ್ಬರನ್ನು ಬಲಿತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಮತ್ತೊಮ್ಮೆ ಸಾಬೀತುಮಾಡಿದೆ. ಸಿದ್ಧರಾಮಯ್ಯ ನೇತೃತ್ವದ ಸರಕಾರ ಪ.ಜಾ.ಮತ್ತು ಪಂಗಡಗಳ ಏಳಿಗೆಂದೇ ಇಡಲಾಗಿದ್ದ ರೂ. 11,000 ಕೋಟಿ ರೂ.ಗಳನ್ನು ಅವರ ಉನ್ನತಿಗೆ ಬಳಸದೆ ರಾಜಕೀಯ ಹಿತಾಸಕ್ತಿಗಳಿಗಾಗಿ ಗ್ಯಾರಂಟಿ ಪೂರ್ತಿಗಾಗಿ ವಿನಿಯೋಗಿಸುತ್ತಿರುವುದು ದುರಂತ. 11,000 ರೂ. ಕೋಟಿ ಹಣ ದಲಿತರಿಗೆಂದೇ ಇರುವ ಹಣ. ಇದರಲ್ಲಿ ಎಸ್.ಸಿ.ಯವರಿಗೆಂದು ಮೀಸಲಿಟ್ಟಿದ್ದ 7,570 ಕೋಟಿ ರೂ. ಮತ್ತು ಎಸ್.ಟಿ.ಯವರಿಗೆಂದು ತೆಗೆದಿರಿಸಿದ್ದ 3,430 ಕೋಟಿ ರೂ. ಗಳನ್ನು ಗ್ಯಾರಂಟಿ ಯೋಜನೆಗೆಳಿಗೆ ನೀಡಲಾಗಿದೆ. ಇದನ್ನು ಸಮಾಜ ಕಲ್ಯಾಣ ಸಚಿವ ಡ| ಎಚ್.ಸಿ. ಮಹದೇವಪ್ಪನವರೇ ಒಪ್ಪಿಕೊಂಡಿದ್ದಾರೆ. ಇದನ್ನು ಬೇರೆಯದಕ್ಕೆ ಬಳಸುವಂತಿಲ್ಲ. ಆದರೂ ಸರಕಾರ ಅದಕ್ಕೂ ಕತ್ತರಿ ಹಾಕುವುದರ ಮೂಲಕ ಅನ್ಯಾಯವೆಸಗುತ್ತಿದೆ. ಇದು ದಲಿತರ ಅಭಿವೃದ್ಧಿಯನ್ನು ಕಡೆಗೆಣಿಸಿದಂತೆ ಎಂದಿದ್ದಾರೆ.
ಇತ್ತ ಉಪಮುಖ್ಯಮಂತ್ರಿಗಳು, ಈ ವರ್ಷ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುವುದು ಕಷ್ಟ ಎಂದು ಸಾರ್ವಜನಿಕವಾಗಿಯೇ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಒಟ್ಟಾರೆ ಕಾಂಗ್ರೇಸ್ ಪಕ್ಷ ರಾಜಕೀಯ ಲಾಭಕ್ಕೊಸ್ಕರ ಇನ್ನೊಬ್ಬರ ಹಿತಾಸಕ್ತಿಗಳನ್ನು ಬಲಿಗೊಡುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇನ್ನೊಂದೆಡೆ ಹಾಲು, ವಿದ್ಯುತ್ ಇತ್ಯಾದಿಗಳ ಬೆಲೆ ಏರಿಕೆ ಮಾಡಿರುವ ಪರಿಣಾಮ ಹೋಟೇಲ್‌ಗಳಲ್ಲಿ ತಿಂಡಿ ತಿನಸುಗಳ ಬೆಲೆ ಅಧಿಕವಾಗಿದೆ. ಇದು ಜನ ಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದನ್ನು ನಿಯಂತ್ರಿಸಿದಿದ್ದಲ್ಲಿ ಜನರೇ ಬೀದಿಗಿಳಿಯುವ ದಿನಗಳು ದೂರವಿಲ್ಲ ಎಂದು ತಿಳಿಸಿದ್ದಾರೆ.