ಸಾಂದರ್ಭಿಕ ಚಿತ್ರ
ದ.ಕ: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು ನಿರಂತರವಾಗಿ ಸುರಿದ ಮಳೆಯಿಂದ ಹಲವೆಡೆ ಗುಡ್ಡ ಕುಸಿದು, ಮನೆ, ದೇವಸ್ಥಾನ, ಸೇತುವೆ ಜಲಾವೃತವಾಗಿದೆ.
ಭಾರಿ ಗಾಳಿ ಮಳೆಯಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಅಲೆಗಳ ಅಬ್ಬರದಿಂದ ಕಡಲ್ಕೊರೆತ ತೀವ್ರಗೊಂಡಿದೆ. ಉಳ್ಳಾಲದ ಉಚ್ಚಿಲ, ಬಟಪಾಡಿ ಪ್ರದೇಶದಲ್ಲಿ ತೆಂಗಿನ ಮರಗಳು ಬಿದ್ದಿವೆ. ಕಡಲತೀರ ಪ್ರದೇಶದಲ್ಲಿ ಜನವಸತಿ ಇಲ್ಲದ ಕಡೆ ಇರುವ ಮನೆ, ಬೀಚ್ ರೆಸಾರ್ಟ್ ಗಳು ಕಡಲ್ಕೊರೆತಕ್ಕೆ ಬಲಿಯಾಗುವ ಅಪಾಯದಲ್ಲಿವೆ. ಇಲ್ಲಿ ಕಡಲ ದಂಡೆಗೆ ಹಾಕಲಾಗಿರುವ ಬೃಹತ್ ಕಲ್ಲುಗಳನ್ನು ಮೀರಿ ಅಲೆಗಳು ದಡಕ್ಕಪ್ಪಳಿಸುತ್ತಿದ್ದು, ಜನರು ತೀವ್ರ ಆತಂಕಕ್ಕೀಡಾಗಿದ್ದಾರೆ.
ಜು.03ರಿಂದ ಆರಂಭವಾದ ಧಾರಾಕಾರ ಮಳೆಯಿಂದ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಜು.05ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿತ್ತು, ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿ ಪಿಯುಸಿವರೆಗೆ ರಜೆ ಘೊಷಿಸಲಾಗಿದೆ. ಮಳೆಯಿಂದ 30ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. 200ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಜು.05ರಂದು ದಿನವಿಡೀ ಸುರಿದ ಭಾರಿ ಗಾಳಿ ಮಳೆಗೆ ಮರಗಳು ಉರುಳಿ ಬಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ ಅನೇಕ ವಾಹನಗಳು ಜಖಂಗೊಂಡಿವೆ.
ನಿರಂತವಾಗಿ ಸುರಿಯುತ್ತಿರುವ ಮಳೆಯಿಂದ ವೇಣೂರು ಹೋಬಳಿ ಸುಲ್ಕೆರಿಮೂಗ್ರು ಗ್ರಾಮದ ನಿವಾಸಿ ಪ್ರಮೋದ್ ಇವರ ಮನೆಯ ತಡೆಗೋಡೆ ಕುಸಿದಿದೆ. ಪುತ್ತಿಲ ಗ್ರಾಮದ ಇಜ್ಜೊಟ್ಟು ಎಂಬಲ್ಲಿಯ ದುಲೈಖ ಯಾನೇ ಉಸ್ಮಾನ್ ಇವರ ಮನೆಯ ಹಿಂಬದಿಯ ದಿಬ್ಬ ಹಾಗೂ ಮನೆಯ ಎಡಭಾಗದಲ್ಲೂ ದಿಬ್ಬ ಕುಸಿದಿದ್ದು ಸಧ್ಯ ಮನೆಗೆ ಯಾವುದೇ ಹಾನಿಯಾಗಿಲ್ಲ.
ಕುಳಾಯಿ ಗ್ರಾಮದ ಸಂತೋಷ್ (34) ಎಂಬವವರು ಜು.5ರ ಬುಧವಾರ ಬೆಳಗ್ಗೆ ಬೈಕಂಪಾಡಿಯಲ್ಲಿರುವ ಸೋಲಾರ್ ಕಂಪನಿಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದರು. ಮರ ಬಿದ್ದು ದಾರಿ ಬಂದ್ ಆದ ಕಾರಣ ಕಂಪೌಂಡ್ ಹಾರಲು ಯತ್ನಿಸಿದ ವೇಳೆ ಮರದೊಂದಿಗೆ ಬಿದ್ದ ವಿದ್ಯುತ್ ದೀಪದ ತಂತಿ ತಗುಲಿ ಸಾವನ್ನಪ್ಪಿದ್ದಾರೆ.