ಬೆಳ್ತಂಗಡಿ:ಕಾಮಗಾರಿಗಳು ನಡೆದು ಅಧಿಕಾರಿಗಳು ಬಿಲ್ ಪಾವತಿ ಮಾಡುವಂತೆ ಹೇಳಿದರೂ ಅಧ್ಯಕ್ಷರು ಸ್ವ ಪ್ರತಿಷ್ಠೆಗಾಗಿ ಬಿಲ್ ನೀಡಲು ಹಿಂದೂ ಮುಂದೂ ನೋಡುತ್ತಿರುವುದು ತಪ್ಪು ಈ ರೀತಿ ನಡೆದರೆ ಗುತ್ತಿಗೆದಾರರು ಏನು ಮಾಡುವುದು ಅವರು ಕುಟುಂಬ ನಿರ್ವಹಿಸುವುದು ಹೇಗೆ ಎಂದು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಘಟನೆ ಲಾಯಿಲ ಗ್ರಾಮ ಸಭೆಯಲ್ಲಿ ನಡೆಯಿತು.
ಕಳೆದ 3 ವರ್ಷಗಳ ಹಿಂದೆ ನಡೆದ ಕಾಮಗಾರಿ ಬಿಲ್ಲನ್ನು ಅಧ್ಯಕ್ಷರು ನೀಡುತ್ತಿಲ್ಲ ಇದರಿಂದ ಗುತ್ತಿಗೆದಾರರಿಗೆ ತೊಂದರೆಯಾಗಿದೆ ಎಂದು ಮಾಜಿ ಸದಸ್ಯ ಪ್ರಾನ್ಸಿಸ್ ಸಭೆಯಲ್ಲಿ ತಿಳಿಸಿದಾಗ ಶೇಖರ್ ಲಾಯಿಲ,ಸುಧಾಕರ್ ಲಾಯಿಲ, ಜಗನ್ನಾಥ್ ಸುರೇಶ್ ಬೈರ ಸೇರಿದಂತೆ ಇತರರು ಧ್ವನಿಗೂಡಿಸಿ ಈ ರೀತಿ ಮಾಡುವುದು ತಪ್ಪು ಕಾಮಗಾರಿ ನಡೆದಿರುವ ಬಗ್ಗೆ ಅಧಿಕಾರಿಗಳೇ ಸರಿಯಾದ ವರದಿ ಹಾಗೂ ಬಿಲ್ ಮಂಜೂರುಗೊಳಿಸುವ ಬಗ್ಗೆ ತಿಳಿಸಿದ್ದಾರೆ. ಅದರೂ ಪಂಚಾಯತ್ ಆಡಳಿತ ಮಂಡಳಿ ನೀಡುತ್ತಿಲ್ಲ ಇದು ತಪ್ಪು ಅದ್ದರಿಂದ ತಕ್ಷಣ ಬಿಲ್ ಮಂಜೂರುಗೊಳಿಸಿ ಎಂದು ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಆಶಾ ಸಲ್ದಾನ ನಮ್ಮ ಆಡಳಿತ ಬರುವ ಹಿಂದಿನ ಕಾಮಗಾರಿಯ ಬಿಲ್ ಆಗಿರುವುದರಿಂದ ಮತ್ತು 15 ನೇ ಹಣಕಾಸಿನಲ್ಲಿ ಇಂತಹ ಕಾಮಗಾರಿಗಳಿಗೆ ಹಣ ನೀಡುವಂತಿಲ್ಲ ಎಂಬ ಬಗ್ಗೆ ಅಧಿಕಾರಿಗಳು ಸೂಚಿಸಿದ್ದರಿಂದ ನೀಡಲಾಗಿಲ್ಲ. ಈ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು ಹಾಗಾದರೆ ಇನ್ನಿತರ ಹಳೆಯ ಬಿಲ್ ಗಳನ್ನು ನೀಡಿದ್ದು ಹೇಗೆ ಇದನ್ನು ಮಾತ್ರ ತಡೆ ಹಿಡಿದದ್ದು ತಪ್ಪು ತಕ್ಷಣ ಅದನ್ನು ನೀಡುವಲ್ಲಿ ಕ್ರಮ ಕೈಗೊಳ್ಳಿ ಎಂದರು. ಆದರ್ಶ ನಗರದಲ್ಲಿ ಹಲವಾರೂ ವರ್ಷಗಳಿಂದ ಗ್ರಾಮ ಪಂಚಾಯತ್ ಚರಂಡಿಯನ್ನು ವ್ಯಕ್ತಿಯೊಬ್ಬರು ತನ್ನ ಖಾಸಗಿ ಜಾಗ ಎಂದು ಬ್ಲಾಕ್ ಮಾಡಿ ನೀರು ಹೋಗದಂತೆ ತಡೆಒಡ್ಡಿದ್ದಾರೆ. ಪಂಚಾಯತ್ ಗೆ ಈ ಬಗ್ಗೆ ಎಷ್ಟು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಈ ರೀತಿ ಅದಲ್ಲಿ ಸಾರ್ವಜನಿಕರಾದ ನಾವು ಸಮಸ್ಯೆಯನ್ನು ಯಾರಲ್ಲಿ ಹೇಳಬೇಕು ಎಂದು ಸ್ಥಳೀಯರು ತಿಳಿಸಿದಾಗ ಈಗಾಗಲೇ ಅಲ್ಲಿ ಚರಂಡಿ ನೀರು ನಿಂತು ರೋಗ ಹರಡುವ ಭೀತಿ ಎದುರಾಗಿದೆ.ಅದ್ದರಿಂದ ತಕ್ಷಣ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾರ್ಗದರ್ಶಿ ಅಧಿಕಾರಿಯವರಿಗೆ ಗ್ರಾಮಸ್ಥರು ಸೂಚಿಸಿದರು.ಮೆಸ್ಕಾಂ ಇಲಾಖೆಯ ಕಂಬಗಳು ಪಂಚಾಯತ್ ಚರಂಡಿಗಳಲ್ಲಿ ಇರುವುದರಿಂದ ಮಳೆಗಾಲದಲ್ಲಿ ಚರಂಡಿ ಸರಿಪಡಿಸಲು ತೊಂದರೆಯಾಗುತ್ತಿದೆ. ಅದ್ದರಿಂದ ಅದನ್ನು ಸರಿಯಾದ ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಅಳವಡಿಸಲು ಸೂಚಿಸಬೇಕು ಜೆಜೆಎಂ ಪೈಪ್ ಲೈನ್ ರಸ್ತೆಯಲ್ಲಿಯೇ ಚರಂಡಿ ತೋಡಿ ಹಾಕಿಕೊಂಡು ಹೋಗುವುದರಿಂದ ಮಣ್ಣಿನ ಮಾರ್ಗ ಮಳೆಗಾಲದಲ್ಲಿ ಸಂಚಾರಿಸದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಮರ್ಪಕವಾಗಿ ಕೆಲಸ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕು.ಕನ್ನಾಜೆಯಲ್ಲಿ ವ್ಯಕ್ತಿಯೊಬ್ಬರು ಪಂಚಾಯತ್ ರಸ್ತೆಯ ಬದಿಯವರೆಗೆ ಅಗೆದು ಕಂಪೌಂಡ್ ಕಟ್ಟಿದ್ದಾರೆ. ಈ ಬಗ್ಗೆ ಪಂಚಾಯತ್ ಸೇರಿದಂತೆ ಅಧಿಕಾರಿಗಳಿಗೆ 5 ತಿಂಗಳಿನಿಂದ ದೂರು ನೀಡಿದರೂ ಸರಿ ಪಡಿಸಿಲ್ಲ. ಎಂದು ಸ್ಥಳೀಯರು ಹೇಳಿದಾಗ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸಾರ್ವಜನಿಕ ರಸ್ತೆಗೆ ಹಾನಿ ಮಾಡಿರುವುದು ತಪ್ಪು ಅದ್ದರಿಂದ ಅದನ್ನು ತಕ್ಷಣ ಅಧಿಕಾರಿಗಳು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು
ಅದಲ್ಲದೇ ಮನೆಯ ತ್ಯಾಜ್ಯ ನೀರನ್ನು ಚರಂಡಿಗಳಿಗೆ ಬಿಡುತ್ತಿರುವವರ ಎಚ್ವರಿಕೆಯ ನೋಟಿಸ್ ನೀಡಿ ನೀರಿನ ಸಂಪರ್ಕ ಕಡಿತಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.ಕೃಷಿ ಇಲಾಖೆ, ತೋಟಗಾರಿಕೆ, ಆರೋಗ್ಯ , ಸಮಾಜ ಕಲ್ಯಾಣ,ಅರಣ್ಯ ,ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿಗಳನ್ನು ಸಭೆಯಲ್ಲಿ ತಿಳಿಸಿದರು.
ಧರ್ಪಿಂಜ ಸೇತುವೆ ಬಳಿ ರಾತ್ರಿ ಹೊತ್ತು ವಾಹನದಲ್ಲಿ ಮದ್ಯ ಸೇವನೆ,ಮಾಡುತ್ತಾರೆ ಇದರಿಂದ ಸಾರ್ವಜನಿಕರಿಗೆ ಸಂಚಾರಿಸಲು ಭಯವಾಗುತ್ತಿದೆ. ಅದಲ್ಲದೇ ಅಂಕಾಜೆ ಪರಿಸರದಲ್ಲಿ ರಾತ್ರಿ ಹೊತ್ತು ಅಪರಿಚಿತ ವಾಹನಗಳು ಬರುತಿದ್ದು ಈ ಬಗ್ಗೆ ಪೊಲೀಸರು ಗಸ್ತು ತಿರುಗುವುದಲ್ಲದೇ ತಪ್ಪು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅದಲ್ಲದೇ ಸಿಸಿ ಕ್ಯಾಮರ ಅಳವಡಿಸಬೇಕು.ಒಂದನೇ ವಾರ್ಡಿನ ನೇತಾಜಿ ಬಡಾವಣೆಯಲ್ಲಿ ಹಲವಾರು ಸೈಟ್ ಗಳು ಖಾಲಿ ಇದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ನಿತಿನ್ ಸಹಾಯಕ ಕಾರ್ಯಾಪಾಲಕ ಅಭಿಯಂತರರು ಇಂಜಿನಿಯರಿಂಗ್ ಇಲಾಖೆ ಬೆಳ್ತಂಗಡಿ ವಹಿಸಿದ್ದರು. ಸಭೆಯಲ್ಲಿ ಅಧ್ಯಕ್ಷೆ ಆಶಾ ಸಲ್ದಾನ, ಗ್ರಾಮ ಪಂಚಾಯತ್ ಸದಸ್ಯರು, ಪಿಡಿಒ ಶ್ರೀನಿವಾಸ್, ಉಪಸ್ಥಿತರಿದ್ದರು.
ಉಪಾಧ್ಯಕ್ಷ ಗಣೇಶ್ ಆರ್. ಸ್ವಾಗತಿಸಿ. ಲೆಕ್ಕ ಸಹಾಯಕಿ ಸುಪ್ರಿತಾ ನಿರ್ವಹಿಸಿದರು.