ಪತ್ರಕರ್ತರಿಗೆ ಸರ್ಕಾರ ಜೀವನ ಭದ್ರತೆ ಕಲ್ಪಿಸುವ ಅಗತ್ಯ ಇದೆ: ಬೆಳ್ತಂಗಡಿಯಲ್ಲಿ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಶಾಸಕ ಹರೀಶ್ ಪೂಂಜ : 6 ಮಂದಿ ಆನಾರೋಗ್ಯ ಪೀಡಿತರಿಗೆ 30 ಸಾವಿರ ರೂ “ದಿತಿ” ದತ್ತಿನಿಧಿ ವಿತರಣೆ:

 

 

ಬೆಳ್ತಂಗಡಿ:ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ,ಪ್ರಾಮಾಣಿಕ ಕಾಳಜಿಯ ಕೆಲಸ ಮಾಡುವ ಪತ್ರಕರ್ತರಿಗೆ ಸರಕಾರಗಳು ಜೀವನ ಭದ್ರತೆ ಕಲ್ಪಿಸುವ ಅಗತ್ಯ ಇದೆ.ಈ ಬಗ್ಗೆ ಅಧಿವೇಶನದಲ್ಲಿ ಗಮನ ಸೆಳೆಯಲಾಗುವುದು.ಪತ್ರಕರ್ತರ ಆತ್ಮ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡದೆ ಅವರಿಗೆ ಶಕ್ತಿ ತುಂಬುವ ಕೆಲಸ ನಡೆಯ ಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದ ಸಮಯವೂ ಭಾರತೀಯರನ್ನು ಒಗ್ಗೂಡಿಸಲು ಪತ್ರಿಕೆಗಳು ಉತ್ತಮ ಕೆಲಸ ಮಾಡಿದ್ದವು.ಆಧುನಿಕ ಕಾಲಘಟ್ಟದಲ್ಲಿ ಪತ್ರಿಕೋದ್ಯಮ ಸಾಕಷ್ಟು ಪೈಪೋಟಿ ನಡೆಸುವ ಸ್ಥಿತಿ ಇದೆ ಎಂದರು. ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಮಾತನಾಡಿ “ಪತ್ರಿಕಾರಂಗದಲ್ಲಿ ಬೆಳವಣಿಗೆಯಾಗಿದ್ದು ಅಭೂತ ಪೂರ್ವ ಬದಲಾವಣೆ ಉಂಟಾಗಿದೆ.ಇಂದು ಓದುವವರ ಸಂಖ್ಯೆ ಕಡಿಮೆಯಾಗಿದೆ.ಗ್ರಂಥಾಲಯಗಳತ್ತ ಜನ ತೆರಳುತ್ತಿಲ್ಲ.ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಪೋಷಕರು ಮೂಡಿಸಬೇಕು.ಪತ್ರಿಕೆ,ಪುಸ್ತಕ ಓದುವುದರಿಂದ ಜ್ಞಾನ ತನ್ನಿಂದ ತಾನೇ ಅಧಿಕಗೊಳ್ಳುತ್ತದೆ.ಭವಿಷ್ಯದ ಬಗ್ಗೆ ಯೋಚಿಸಿ ಬರಹಗಾರರು ಮುಂದುವರಿಯ ಬೇಕು.ಇನ್ನೊಬ್ಬರ
ತೇಜೋವಧೆ, ವೈಯಕ್ತಿಕ ನಿಂದನೆ ಪತ್ರಕರ್ತರಿಗೆ ಶೋಭೆಯಲ್ಲ”ಎಂದರು.ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಜೋಸೆಫ್ ಎನ್.ಎಂ.ಶುಭ ಹಾರೈಸಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮೀಣ ಕಾರ್ಯದರ್ಶಿ ಭುವನೇಶ್ ಜಿ., ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ
ಹೃಷಿಕೇಶ್ ಧರ್ಮಸ್ಥಳ ವಹಿಸಿದ್ದರು.
ಕಳೆದ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಪೈಕಿ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಪೆರ್ಲ ಬೈಪಾಡಿ ಪ್ರೌಢಶಾಲಾ ವಿದ್ಯಾರ್ಥಿನಿ ಸುರಕ್ಷಿತಾ (613) ಕಾಯರ್ತಡ್ಕ ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಶರಣ್ಯಾ (609) ಮತ್ತು ಎನ್. ಹಿತಾ (609) ಇವರನ್ನು ಅಭಿನಂದಿಸಲಾಯಿತು.

ಸಂಘದ ಸದಸ್ಯ ಮನೋಹರ ಬಳಂಜ ಹಾಗೂ ಲಿಖಿತಾ ಮನೋಹರ್ ಬಳೆಂಜ ನೀಡುತ್ತಾ ಬರುತ್ತಿರುವ ದಿತಿ ದತ್ತಿನಿಧಿಯನ್ನು ತಲಾ 5 ಸಾವಿರದಂತೆ 6ಮಂದಿ ಅಶಕ್ತ ಬಡ ಅನಾರೋಗ್ಯ ಪೀಡಿತರಿಗೆ ಒಟ್ಟು 30 ಸಾವಿರ ರೂ ಹಸ್ತಾಂತರ ಮಾಡಲಾಯಿತು.

ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಏಣಿಂಜೆ ಸ್ವಾಗತಿಸಿದರು. ಹಿರಿಯ ಸದಸ್ಯ ಆರ್. ಎನ್. ಪೂವಣಿ ಸಂದೇಶ ವಾಚಿಸಿದರು.ಗಣೇಶ್ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.ತುಕಾರಾಂ ಬಿ.ವಂದಿಸಿದರು.

error: Content is protected !!