ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ: ದಶಮಾನೋತ್ಸವ ಆಚರಣೆ

ಉಜಿರೆ: ಸರ್ವರ ಆರೋಗ್ಯಭಾಗ್ಯ ರಕ್ಷಣೆಗೆ ಕಾಯಕಲ್ಪ ನೀಡುವ ಆಸ್ಪತ್ರೆಗಳು ಸರ್ವಧರ್ಮೀಯರ ದೇವಾಲಯಗಳಾಗಿವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಶುಕ್ರವಾರ ಉಜಿರೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು.

ಎಲ್ಲರೂ ಆರೋಗ್ಯವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದ ಅವರು ರೋಗದ ಲಕ್ಷಣ ಕಂಡು ಬಂದ ತಕ್ಷಣ ಚಿಕಿತ್ಸೆ ಪಡೆಯಬೇಕು. ಉಜಿರೆ ಆಸ್ಪತ್ರೆಯಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳಿದ್ದು ರಿಯಾಯಿತಿ ದರದಲ್ಲಿ ಶುಶ್ರೂಷೆ ನೀಡಲಾಗುತ್ತದೆ. ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿದಾನ ಧರ್ಮಸ್ಥಳದಲ್ಲಿ ನಿತ್ಯೋತ್ಸವವಾಗಿದ್ದು, ಔಷಧದಾನದ ಮೂಲಕ ಜನರ ಆರೋಗ್ಯ ರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದರು.

ಬೆಂಗಳೂರಿನಲ್ಲಿರುವ ಬೆಂಗಳೂರು ಕಿಡ್ನಿ ಫೌಂಡೇಶನ್‌ನಲ್ಲಿ ಕಿಡ್ನಿ ರೋಗಿಗಳ ಚಿಕಿತ್ಸೆಗಾಗಿ ಪ್ರತಿವರ್ಷ ಧರ್ಮಸ್ಥಳದಿಂದ 25 ಲಕ್ಷ ರೂ. ನೆರವು ನೀಡಲಾಗುತ್ತದೆ. ಕಿದ್ವಾಯಿ ಆಸ್ಪತ್ರೆಗೆ ಐದು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡಲಾಗಿದೆ. ವೈದ್ಯರು, ದಾದಿಯರು ಮತ್ತು ಎಲ್ಲಾ ಸಿಬ್ಬಂದಿಯ ಸೌಜನ್ಯಪೂರ್ಣ ನಗುಮೊಗದ ಸೇವೆಯಿಂದ ರೋಗಿಗಳು ಶೀಘ್ರ ಗುಣಮುಖರಾಗುತ್ತಾರೆ. ಈ ದಿಸೆಯಲ್ಲಿ ಎಲ್ಲಾ ಸಿಬ್ಬಂದಿ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ಅಭಿನಂದಿಸಿದರು.


ಹೇಮಾವತಿ ವೀ. ಹೆಗ್ಗಡೆಯವರು ಶುಭಾಶಂಸನೆ ಮಾಡಿ, ವೈದ್ಯರ ಮುಗುಳ್ನಗುಭರಿತ ವಿಶ್ವಾಸ ಮತ್ತು ಸಾಂತ್ವನದ ಮಾತುಗಳು ರೋಗಿಗಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿ ಅವರು ಶೀಘ್ರ ಗುಣಮುಖರಾಗುತ್ತಾರೆ. ವೈದ್ಯರು ರೋಗಿಗಳ ಬಗ್ಗೆ ಕಾಳಜಿ ವಹಿಸಿ ಪ್ರೀತಿ-ವಿಶ್ವಾಸದಿಂದ ಮಾನವೀಯತೆಯೊಂದಿಗೆ ನಿಸ್ವಾರ್ಥ ಸೇವೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.


ಆಸ್ಪತ್ರೆಯಲ್ಲಿ ಸೇವೆಸಲ್ಲಿಸಿದ ಡಾ. ಬಾಲಕೃಷ್ಣ ಭಟ್ ಡಾ. ಕಮಲಾ ಭಟ್, ನರ್ಸಿಂಗ್ ಅಧೀಕ್ಷಕಿ ಶೆರ್ಲಿ, ನೇತ್ರಾ, ಸಂಧ್ಯಾ, ಮನ್ಮಥ್ ಕುಮಾರ್, ರಂಜಿತಾ, ಎಸ್.ಡಿ.ಎಂ. ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ ಅವರನ್ನು ಸನ್ಮಾನಿಸಲಾಯಿತು.


ಡಿ. ಹರ್ಷೇಂದ್ರ ಕುಮಾರ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ. ಸಾತ್ವಿಕ್ ಜೈನ್ ಮತ್ತು ಪೂರಣ್‌ವರ್ಮ ಉಪಸ್ಥಿತರಿದ್ದರು.

ಆಸ್ಪತ್ರೆಯ ನಿರ್ದೇಶಕ ಜನಾರ್ದನ್ ಎಂ. ಸ್ವಾಗತಿಸಿದರು. ಜಗನ್ನಾಥ ಮತ್ತು ಡಾ. ಮೀರಾಅನುಪಮ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!