ಬೆಳ್ತಂಗಡಿ: ಒಡಿಶಾದ ಬಾಲಸೋರ್ ಜಿಲ್ಲೆಯ ಬಹಾನಗರ್ನಲ್ಲಿ ಶುಕ್ರವಾರ ರಾತ್ರಿ ನಡೆದ ಭೀಕರ ರೈಲು ದುರಂತದಲ್ಲಿ 280ಕ್ಕೂ ಹೆಚ್ಚು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಸುಮಾರು 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಪಘಾತಕ್ಕೀಡಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಳಸ ಸೇರಿದಂತೆ ಇತರ ಜಿಲ್ಲೆಯ 110 ಮಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳಸ ತಾಲೂಕಿನ ಹೊರನಾಡು, ಸಂಸೆ, ಕುದುರೆಮುಖ ಹಾಗೂ ದಕ್ಷಿಣ ಕನ್ನಡದವರು ಸೇರಿದಂತೆ 110 ಮಂದಿ ಉತ್ತರ ಭಾರತದ ತೀರ್ಥಕ್ಷೇತ್ರಗಳ ದರ್ಶನಕ್ಕೆ ಹೋಗಿದ್ದರು. ಅವರು ಗುರುವಾರ ಯಶವಂತಪುರ ರೈಲು ನಿಲ್ದಾಣದಿಂದ ಯಶವಂತಪುರ – ಹೌರಾ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಅಪಘಾತ ನಡೆಯುವ ಕೆಲವು ಗಂಟೆಗಳ ಹಿಂದೆ ರೈಲಿನ ಬೋಗಿಗಳ ಇಂಜಿನ್ ಬದಲಾವಣೆ ಮಾಡಲಾಗಿತ್ತು.
ಹಿಂದಿನ ಬೋಗಿಯಲ್ಲಿದ್ದ 110 ಯಾತ್ರಿಕರು ರೈಲಿನ ಎಸ್3, ಎಸ್ 4 ಬೋಗಿಗಳಲ್ಲಿ ಇದ್ದರು. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆ ಬಗ್ಗೆ ಪ್ರಯಾಣಿಕ ಸಂತೋಷ್ ಜೈನ್ ಮಾಹಿತಿ ನೀಡಿದ್ದು, ಅಪಘಾತಕ್ಕೀಡಾದ ಬೆಂಗಳೂರು-ಹೌರಾ ರೈಲಿನಲ್ಲಿದ್ದ ನಾವೆಲ್ಲ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದೇವೆ. ನಾವು ಪ್ರಯಾಣಿಸುತ್ತಿದ್ದ ಬೆಂಗಳೂರು-ಹೌರಾ ರೈಲು ಒಡಿಶಾ ಗಡಿ ಪಾಸ್ ಆಗಿ ಕೋಲ್ಕತ್ತಕ್ಕೆ ಹೋಗಬೇಕಿತ್ತು. ಪ್ರಯಾಣವೂ ಚೆನ್ನಾಗಿಯೇ ಆಗುತ್ತಿತ್ತು. ಆದರೆ ರಾತ್ರಿ 8:30ರ ಹೊತ್ತಿಗೆ ರೈಲು ಒಮ್ಮೆಲೇ ನಿಂತುಬಿಟ್ಟಿತು. ಬಸ್ ಅಪಘಾತವಾದಾಗ ಹೇಗೆ ಶಬ್ದ ಬರುತ್ತದೆಯೋ, ಹಾಗೇ ಶಬ್ದ ಬಂತು. ಡಿಕ್ಕಿಯ ರಭಸಕ್ಕೆ ನಮ್ಮ ರೈಲಿನ ಕೆಲವು ಬೋಗಿಗಳು ಉರುಳಿ ಬಿದ್ದಿದ್ದವು ಎಂದರು.
ಅವುಗಳಲ್ಲಿ ಇದ್ದವರಿಗೆ ಗಾಯವಾಗಿತ್ತು. ಕೆಲವರು ಸ್ಥಳದಲ್ಲೇ ಮೃತಪಟ್ಟರು. ರಾತ್ರಿ 12ರ ಹೊತ್ತಿಗೆ ಕೋಲ್ಕತ್ತಕ್ಕೆ ಬೇರೆ ರೈಲಿನ ವ್ಯವಸ್ಥೆ ಮಾಡಿದ್ದರು. ಹೀಗಾಗಿ 110 ಜನ ಯಾತ್ರಿಗಳು ಸುರಕ್ಷಿತವಾಗಿ ಕೋಲ್ಕತ್ತಾ ತಲುಪಿದ್ದೇವೆ. ಅಲ್ಲಿಂದ ಮೂರು ಬಸ್ಗಳ ಮೂಲಕ ಶಿಖರಜಿಗೆ ಪ್ರಯಾಣ ಬೆಳೆಸಿದ್ದೇವೆ. ನಾವೆಲ್ಲರೂ ಸುರಕ್ಷಿತವಾಗಿದ್ದು ಯಾತ್ರೆ ಮುಗಿಸಿ, ದೇವರ ದರ್ಶನ ಪಡೆದೇ ಬರುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಯೋಗ ಕ್ಷೇಮ ವಿಚಾರಿಸಿದ ಶಾಸಕ ಹರೀಶ್ ಪೂಂಜ:
ಜೈನರ ಪುಣ್ಯ ತೀರ್ಥ ಕ್ಷೇತ್ರವಾದ ಜಾರ್ಖಂಡ್ ರಾಜ್ಯದ ಗಿರಡಿ ಜಿಲ್ಲೆಯ ಸಮ್ಮೇದ ಶಿಖರ್ಜಿ ಯಾತ್ರೆಗೆ ಕಳಸದಿಂದ ತೆರಳಿದ್ದ 110 ಯಾತ್ರಾರ್ಥಿಗಳ ತಂಡದಲ್ಲಿ ಬೆಳ್ತಂಗಡಿಯ ಪುದುವೆಟ್ಟು, ಧರ್ಮಸ್ಥಳ, ಗರ್ಡಾಡಿ, ವೇಣೂರು, ಗುರುವಾಯನಕೆರೆ, ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯವರಿದ್ದು ಈ ಬಗ್ಗೆ ಮಾಹಿತಿ ತಿಳಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಕ್ಷಣ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಯೋಗಕ್ಷೇಮ ವಿಚಾರಿಸಿ ಏನಾದರೂ ಸಹಾಯ ಬೇಕಾದಲ್ಲಿ ತಿಳಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.