ಬೆಳ್ತಂಗಡಿ: ಮೇ ತಿಂಗಳಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಬೆಳ್ತಂಗಡಿ ತಾಲೂಕಿನಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ಈಗಾಗಲೇ ಎರಡನೇ ಸುತ್ತಿನ ಪ್ರಚಾರದ ಕಾರ್ಯವನ್ನು ಪ್ರಾರಂಭಿಸಿದ್ದಾರೆ.ಇತ್ತ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಕೂಡ ತಾಲೂಕಿನ ವಿವಿದೆಡೆ ಪ್ರಚಾರ ಕಾರ್ಯ ಪ್ರಾರಂಭಿಸಿದರೂ ಪಕ್ಷದಲ್ಲಿ ಕೆಲವೊಂದು ಅಸಮಾಧಾನ ಹೊಗೆಯಾಡುತ್ತಿದೆ.ಯಾವುದೇ ಕಾರಣಕ್ಕೂ ಹೊರಗಿನಿಂದ ಬಂದವರಿಗೆ ಟಿಕೇಟ್ ನೀಡಬಾರದು ಏನಿದ್ದರೂ ಬಂಗೇರ ಅಥವಾ ನನಗೆ ನೀಡಬೇಕು ಎಂದು ಮಾಜಿ ಸಚಿವ ಗಂಗಾಧರ ಗೌಡ ಸ್ಪಷ್ಟವಾಗಿ ಹೇಳಿದ್ದಲ್ಲದೇ ಪರೋಕ್ಷವಾಗಿ ರಕ್ಷಿತ್ ಶಿವರಾಂ ವಿರುದ್ಧ ಹೇಳಿಕೆಗಳನ್ನೂ ನೀಡಿದ್ದರು. ಅದರೆ ನಂತರದ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರಿಗೆ ಹೈಕಮಾಂಡ್ ಟಿಕೇಟ್ ಅಂತಿಮಗೊಳಿಸಿತ್ತು. ಇದರಿಂದ ಮತ್ತಷ್ಟು ಬೇಸರ ವ್ಯಕ್ತಪಡಿಸಿದ ಗಂಗಾಧರ ಗೌಡ ಅವರು ನಾಮಪತ್ರ ಸಲ್ಲಿಕೆ ಸೇರಿದಂತೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದೇ ತನ್ನ ಅಸಾಮಾಧಾನ ಹೊರಹಾಕಿದ್ದರು. ಈ ಬಗ್ಗೆ ಮಾಜಿ ಶಾಸಕ ವಸಂತ ಬಂಗೇರ ಕೂಡ ಗೌಡರಿಗೆ ಅಸಾಮಾಧಾನ ಇದೆ ಮುಂದಿನ ದಿನಗಳಲ್ಲಿ ಮಾತುಕತೆ ಮೂಲಕ ಸಮಸ್ಯೆ ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದರು. .ಈ ಎಲ್ಲಾ ಬೆಳವಣಿಗೆಯ ನಂತರ ನಾಳೆ ಎ 22 ರಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಧರ್ಮಸ್ಥಳಕ್ಕೆ ಆಗಮಿಸಿ ನಂತರ ಉಜಿರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಅವರ ಪರವಾಗಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಗಂಗಾಧರ ಗೌಡರ ನಡೆ ಕುತೂಹಲ ಮೂಡಿಸಿದೆ. ಅವರು ಡಿಕೆಶಿ ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳಲಿದ್ದಾರೆಯೇ, ಅಥವಾ ಗೈರಾಗಲಿದ್ದಾರೆಯೇ..? ಒಂದು ವೇಳೆ ಅಸಾಮಾಧಾನದಲ್ಲಿರುವ ಮಾಜಿ ಸಚಿವ ಗಂಗಾಧರ ಗೌಡರನ್ನು ಸಮಾಧಾನಗೊಳಿಸಿ ಬೆಳ್ತಂಗಡಿ ಕಾಂಗ್ರೆಸ್ ಬಿನ್ನಭಿಪ್ರಾಯವನ್ನು ಶಮನಗೊಳಿಸಬಹುದೇ ಕನಕಪುರದ ಬಂಡೆ ಎಂದು ಕಾದು ನೋಡಬೇಕಾಗಿದೆ.