ಅಬ್ಬಬ್ಬಾ.. 200 ಕೋಟಿ ರೂ. ಗಡಿ ದಾಟಿದ ಅಕ್ರಮ ನಗದು, ಮದ್ಯ, ಉಡುಗೊರೆ ಜಪ್ತಿ ಮೊತ್ತ..!: 6 ಕೋಟಿ ಕನ್ನಡಿಗರ ಆಸ್ತಿ ಕೆಲವೇ ಕೆಲವು ರಾಜಕಾರಣಿಗಳ ಕೈಯಲ್ಲಿ..!: ಚುನಾವಣೆ ಹಿನ್ನೆಲೆ: ರಾಜ್ಯದಲ್ಲಿ ಕುರುಡು ಕಾಂಚಾಣದ ಅಬ್ಬರ ಭಾರೀ ಜೋರು..!

ಬೆಂಗಳೂರು: ಬಿಸಿಲಿನ ತಾಪಕ್ಕೆ ಭೂಮಿ ಬರಡಾಗಿ ನೀರಿಲ್ಲದೆ ಒದ್ದಾಡೋ ಜನ, ಸಾಲ ಹೆಚ್ಚಾಗಿ ಸಾಯುತ್ತಿರೋ ರೈತರು, ಕೆಲಸ ಸಿಗದೆ ಪರದಾಡೋ ಯುವಜನತೆ, ಬೇರೆ-ಬೇರೆ ರೂಪದಲ್ಲಿ ಕಾಡುತ್ತಿರುವ ಬಡತನ. ಕಳೆದ 5 ವರ್ಷದಲ್ಲಿ ರಾಜ್ಯದಲ್ಲಿ ಏನಾದರೂ ಬದಲಾವಣೆ ಆಗಿದೆಯಾ ಅಂತ ಕೇಳಿದ್ರೆ ಸ್ವಲ್ಪ ಜನ ಹೌದು ಅಂತಾರೆ, ಹಲವಷ್ಟು ಜನ ಇಲ್ಲಾ ಅಂತಾರೆ. ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ದುಡಿಮೆಯ ಬಹುಪಾಲು ಬೆಲೆ ಏರಿಕೆಯ ಕಾವಿನ ಮಧ್ಯೆ ಕರಗಿ ಹೋಗುತ್ತಿದೆ. ಸಾಕಷ್ಟು ಸರಕು- ಸೇವೆಗಳಿಗೆ ಜಿಎಸ್‌ಟಿ ಕಟ್ಟಲೆ ಬೇಕು. ಕಷ್ಟ ಆದರೆ ಜನ ಒಮ್ಮೆ ಕೂಗಾಡುತ್ತಾರೆ, ಬೀದಿಗಿಳಿದು ಹೋರಾಟ ಮಾಡುತ್ತಾರೆ, ಮತ್ತೆ ಸರಕಾರಕ್ಕೆ ತೆರಿಗೆ ರೂಪದಲ್ಲಿ ನಾವೆಷ್ಟೇ ಹಣ ಕಟ್ಟಿದರೂ ಅದು ರಾಜ್ಯದ ಅಭಿವೃದ್ದಿಗೆ ಅಂತ ಸುಮ್ಮನಾಗುತ್ತಾರೆ. ಆದರೆ ಇಂದು ನಿಜವಾಗಿಯೂ ರಾಜ್ಯದ ಅಭಿವೃದ್ಧಿ ಎಷ್ಟಾಗಿದೆ ಎಂಬುದನ್ನು ಅರಿತುಕೊಳ್ಳುವ ಹಾಗೂ ರಾಜ್ಯದ ಬಹುಪಾಲು ಸಂಪತ್ತು ಯಾರ ಕೈಯಲ್ಲಿದೆ ಎಂಬುದನ್ನು ಯೋಚಿಸಬೇಕಾದ ಸಮಯ.

ಮೇ.10ರಂದು ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ. ಅದಕ್ಕಾಗಿ ಎಲ್ಲಾ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪ್ರಚಾರಕ್ಕಾಗಿ ಕೋಟಿ-ಕೊಟಿ ಹಣ ವ್ಯಯಿಸುತ್ತಿದೆ. ಇವೆಲ್ಲದರ ಮೇಲೆ ಆದಾಯ ತೆರಿಗೆ, ಪೊಲೀಸರು, ಅಬಕಾರಿ ಇಲಾಖೆಯವರು ಹದ್ದಿನ ಕಣ್ಣಿಟ್ಟಿದಂತು ಸುಳ್ಳಲ್ಲ. ಹೀಗಾಗಿ  2023 ಮಾ.29ರಿಂದ ಏ.10ರ ತನಕ ಅಧಿಕಾರಿಗಳು ಬರೊಬ್ಬರಿ 108.78 ಕೋಟಿ ರೂ ಮೌಲ್ಯದ ನಗದು, ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಬಳಿಕ ಜಪ್ತಿ ಮಾಡಿದ ಹಾಗೂ ಇಲ್ಲಿವರೆಗೆ ಒಟ್ಟು 204.09 ಕೋಟಿ ರೂ ಮೌಲ್ಯದ ಅಕ್ರಮ ನಗದು, ಮದ್ಯ, ವಸ್ತುಗಳು ಅಧಿಕಾರಿಗಳ ವಶವಾಗಿದೆ.

ವಿಚಕ್ಷಣಾ ದಳ, ಸ್ಥಿರ ಕಣ್ಗಾವಲು ತಂಡ, ಐಟಿ, ಪೊಲೀಸ್ ಅಧಿಕಾರಿಗಳು ಈವರೆಗೆ ಒಟ್ಟು 76.70 ಕೋಟಿ ನಗದು ವಶಕ್ಕೆ ಪಡೆದಿದ್ದಾರೆ. ಒಟ್ಟು 19.59 ಮೌಲ್ಯದ ಉಚಿತ ಕೊಡುಗೆಗಳನ್ನು, 42.82 ಕೋಟಿ ರೂ. ಮೌಲ್ಯದ 10,72,767 ಲೀಟರ್ ಮದ್ಯವನ್ನು, 15.25 ಕೋಟಿ ಮೌಲ್ಯದ 915 ಕೆ.ಜಿ. ಡ್ರಗ್ಸ್, 45.81 ಕೋಟಿ ಮೌಲ್ಯದ 95.77 ಕೆ.ಜಿ ಬಂಗಾರ, 3.89 ಕೋಟಿ ರೂ. ಮೌಲ್ಯದ 561 ಕೆ.ಜಿ. ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ.

ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ 11,276 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಪ್ರಕರಣಗಳು ಹೆಚ್ಚಾಗಿವೆ ಎಂದು ತಿಳಿದು ಬಂದಿದೆ.

error: Content is protected !!