ಎ.17 ರಂದು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನಾಮಪತ್ರ ಸಲ್ಲಿಕೆ: 25 ಸಾವಿರ ಜನರ ಬೃಹತ್ ಮೆರವಣಿಗೆ ‘ಮಾಜಿ ಸಚಿವ ಗಂಗಾಧರ ಗೌಡರಿಗೆ ಅಸಮಾಧಾನ ಇದೆ’- ವಸಂತ ಬಂಗೇರ

ಬೆಳ್ತಂಗಡಿ:  ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರು ಎ.17ರಂದು ನಾಮಪತ್ರ ಸಲ್ಲಿಸಲಿದ್ದು, ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ 241 ಬೂತುಗಳಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅವರು ಎ.12ರಂದು ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಅಂದು ಬೆಳಿಗ್ಗೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಚುನಾವಣಾ ಸಭೆ ನಡೆಯಲಿದೆ. ಸಭೆಯಲ್ಲಿ ಕೆಪಿಸಿಸಿ ಮಾಧ್ಯಮ ವಕ್ತಾರರಾದ ನಿಕೇತ್ ರಾಜ್ ಮೌರ್ಯರವರು ಪ್ರಧಾನ ಭಾಷಣ ಮಾಡಲಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಗಂಗಾಧರ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜ ಕೆಪಿಸಿಸಿ ಸಂಯೋಜಕರಾದ ಶಾಹಿದ್ ತೆಕ್ಕಿಲ್ಲ್ ಮತ್ತು ಜಿಲ್ಲಾ ಮುಟ್ಟದ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ ಎಂದರು.

ಸಭೆಯ ಬಳಿಕ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಲಿದ್ದಾರೆ. ಕಳೆದ ಭಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಿಸಿದ ಆಶ್ವಾಸನೆಗಳನ್ನು ಈಡೇರಿಸಿದೆ. ಪ್ರತಿ ಮನೆಯ ಒಡತಿಗೆ ರೂ.2 ಸಾವಿರ ನೀಡುವುದು, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದು ಕಾಂಗ್ರೆಸ್‌ನ ಗ್ಯಾರಂಟಿಯಲ್ಲಿ ಸೇರಿದೆ. ಈಗಾಗಲೇ ಬೆಳ್ತಂಗಡಿ ತಾಲೂಕಿನ 241 ಬೂತುಗಳಲ್ಲಿ ಕಾರ್ಯಕರ್ತರು ಮತದಾರರ ಮನೆ, ಮನೆಗಳಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಿದೆ. ರಾಜ್ಯದಲ್ಲಿ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದರು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಗಂಗಾಧರ ಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದ ಬಳಿಕ ನಡೆದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ, ಪತ್ರಿಕಾಗೋಷ್ಠಿಗೂ ಬಂದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕ ವಸಂತ ಬಂಗೇರ ಅವರು ಟಿಕೇಟ್ ನೀಡದಿರುವ ಬಗ್ಗೆ ಬೇಸರ ಸಾಮಾನ್ಯ ಇದರ ಬಗ್ಗೆ ಗಂಗಾಧರ ಗೌಡರಲ್ಲಿ ಮಾತನಾಡಿ, ಎಲ್ಲವನ್ನು ಸರಿಮಾಡುತ್ತೇನೆ ಎಂದು ಬಂಗೇರ ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಪರ್ಸೆಂಟೆಜ್ ವ್ಯವಹಾರ ಮರಳುಗಾರಿಕೆ, ಮರಗಳ್ಳತನ, ವಿಪರೀತ ಬೆಲೆ ಏರಿಕೆಯಿಂದಾಗಿ ಈಗಾಗಲೇ ರೋಸಿ ಹೋಗಿರುವ ಜನ ಬದಲಾವಣೆಯನ್ನು ಬಯಸಿದ್ದಾರೆ. ಆದ್ದರಿಂದ ತಾಲೂಕಿನಾದ್ಯಂತ ಕಾಂಗ್ರೆಸ್ಸಿಗೆ ಜನ ಬೆಂಬಲ ಸಿಗುತ್ತಿದೆ. ಬೃಹತ್ ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಸಲಾಗುವುದು. ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾ ಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಗ್ರಾಮ ಪಂಚಾಯತುಗಳ ಬಿಜೆಪಿ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಸುಮಾರು 25 ಸಾವಿರ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಿಲಿದ್ದಾರೆ. ಕಾಂಗ್ರೆಸ್ ಪಕ್ಷ ಘೋಷಿಸಿದ ಗ್ಯಾರಂಟಿ ಕಾರ್ಡ್‌ನ್ನು ಕಾರ್ಯಕರ್ತರು ಮನೆ, ಮನೆಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಮಾತನಾಡಿ, ಎ.17ರಂದು ನಡೆಯುವ ಕಾರ್ಯಕರ್ತರ ಸಮಾವೇಶಕ್ಕೆ ತಾಲೂಕಿನ ಪ್ರತಿ ಬೂತಿನಿಂದ ನೂರರಂತೆ ಕಾರ್ಯಕರ್ತರು ಬರುತ್ತಾರೆ. ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ. ಗೌಡ, ಪ್ರಮುಖರಾದ ಸಲೀಂ ಗುರುವಾಯನಕೆರೆ, ಈಶ್ವರ ಭಟ್ ಮಾಯಿಲ್ತೋಡಿ, ಮನೋಹರ ಇಳಂತಿಲ, ರಾಜಶೇಖರ ಶೆಟ್ಟಿ ಮಡಂತ್ಯಾರು, ಸೆಭಾಸ್ಟಿನ್ ಕಳೆಂಜ, ವಿನ್ಸೆಂಟ್ ಮಡಂತ್ಯಾರು, ಪದ್ಮನಾಭ ಸಾಲಿಯಾನ್ ಮಾಲಾಡಿ ಉಪಸ್ಥಿತರಿದ್ದರು.

error: Content is protected !!