ಬೆಳ್ತಂಗಡಿ: ಪ್ರತಿ ಚುನಾವಣೆಗೆ ಮೊದಲು ದೇವಸ್ಥಾನಗಳ ಭೇಟಿ ನೀಡುತ್ತಿದ್ದೆ. ಅದರಂತೆ ಈ ಬಾರಿಯೂ ಭೇಟಿ ನೀಡಿದ್ದೇನೆ. ಕನ್ನಡ ನಾಡಿನ ಸುಭೀಕ್ಷೆಗಾಗಿ ಸತ್ಯಕ್ಕಾಗಿ ಜಯ ಸಿಗುವಂತೆ ಪ್ರಾರ್ಥನೆ ಮಾಡಿದ್ದೇನೆ. ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಅವರು ಎ 12 ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ಟಿಕೆಟ್ ವಂಚಿತರೊಂದಿಗೆ ಮಾತನಾಡಿದ್ದೇವೆ. ಅವರನ್ನು ಶಾಸಕರಾಗಿ ಮಾಡಿರೋದು ಕೂಡಾ ಬಿಜೆಪಿ ಪಕ್ಷ. ಅವರನ್ನು ಬಿಜೆಪಿ ಗೌರವ ಪೂರ್ವಕವಾಗಿ ನಡೆಸಿಕೊಂಡಿದೆ. ರಾಜಕೀಯ ಭವಿಷ್ಯ ಕೂಡಾ ಸುರಕ್ಷಿತವಾಗಿ ಇರಲಿದೆ ಎಂದರು.
ಟಿಕೆಟ್ ದೊರಕದಿದ್ದಾಗ ಅಸಮಾಧಾನ ಸಹಜ. ಸವದಿಯವರು ಬೇಸರದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಅವರಿಗೆ ಪಕ್ಷದೊಂದಿಗೆ ಸಂಬಂಧವಿದೆ. ನನ್ನೊಂದಿಗೂ ಬಹಳ ಹತ್ತಿರದ ಸಂಬಂಧವಿದೆ. ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ. ನಾಳೆ ನಾಡಿದ್ದರಲ್ಲಿ ಎರಡನೇ ಪಟ್ಟಿಯೂ ಬಿಡುಗಡೆಯಾಗಲಿದೆ ಎಂದು ಬೊಮ್ಮಾಯಿ ಹೇಳಿದರು.
ವಿನಯ ಕುಲಕರ್ಣಿ ಇದಿರಾಳಿಯಾಗಿ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಬೊಮ್ಮಾಯಿಯರು, ಬಿಜೆಪಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನನ್ನ ಎದುರಾಳಿಯಾಗಿ ಯಾರು ಸ್ಪರ್ಧಿಸುವುದೆಂದು ನನಗೆ ಮುಖ್ಯವಲ್ಲ. ನನಗೆ ನನ್ನ ಕ್ಷೇತ್ರದ ಜನರು ಮುಖ್ಯ. ಯಾರೇ ಆದರೂ ನಾನು ಚುನಾವಣೆಯಲ್ಲಿ ಎದುರಿಸುತ್ತೇನೆ ಎಂದರು.
ಟಿಕೆಟ್ ಘೋಷಣೆ ಬೆನ್ನಲ್ಲೇ ಹಲವರಿಂದ ರಾಜಕೀಯ ನಿವೃತ್ತಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿಯರು, ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗೋದಾಗಿ ಹೇಳುತ್ತಿದ್ದಾರೆ. ರಾಜಕೀಯದಿಂದ ನಿವೃತ್ತಿಯಾಗೋದಾಗಿ ಹೇಳಿಲ್ಲ. ಈಶ್ವರಪ್ಪ ಜೊತೆ ವರಿಷ್ಠರು ಮಾತನಾಡುತ್ತಾರೆ. ಎಸ್ ಅಂಗಾರ ಜಂಟಲ್‌ಮ್ಯಾನ್ ಅವರೊಂದಿಗೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.ಧರ್ಮಸ್ಥಳ ಭೇಟಿ ವೇಳೆ ಕ್ಷೇತ್ರದ ವತಿಯಿಂದ ಹರ್ಷೆಂದ್ರ ಕುಮಾರ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ,ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಸೇರಿದಂತೆ ಇತರ ಮುಖಂಡರುಗಳು ಉಪಸ್ಥಿತರಿದ್ದರು. ಧರ್ಮಸ್ಥಳದಿಂದ ಅವರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ನಾಳೆ ಅವರು ಕಟೀಲು, ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.