5, 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗೆ ಕೋರ್ಟ್​ ಗ್ರೀನ್ ಸಿಗ್ನಲ್.. ಫಲಿತಾಂಶ ಬಹಿರಂಗ ಪಡಿಸದಂತೆ ಆದೇಶ

 

 

 

ಬೆಂಗಳೂರು: ಐದು ಮತ್ತು ಎಂಟನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಮುಂದಾಗಿದ್ದ ಸರ್ಕಾರಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೆ, ಮುಂದಿನ 10 ದಿನಗಳಲ್ಲಿ ದಿನಾಂಕ ನಿಗದಿ ಪಡಿಸಿ ಪರೀಕ್ಷೆಗಳನ್ನು ನಡೆಸಬಹುದು ಎಂದು ನ್ಯಾಯಪೀಠ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚನೆ ನೀಡಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ.

ಐದು ಮತ್ತು ಎಂಟನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ರದ್ದು ಗೊಳಿಸಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸರ್ಕಾರ ದ್ವಿ ಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದ್ರ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಪೀಠ, ಏಕ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿ ಆದೇಶಿಸಿದೆ.ಅಲ್ಲದೆ, ಮುಂದಿನ ಹತ್ತು ದಿನಗಳಲ್ಲಿ ಪರೀಕ್ಷಾ ದಿನಾಂಕ ನಿಗದಿ ಪಡಿಸಿ ಹತ್ತು ದಿನಗಳ ಬಳಿಕ ಪರೀಕ್ಷೆ ನಡೆಸಬೇಕು. ಪರೀಕ್ಷೆಗೆ ಪ್ರಸ್ತುತ ಇರುವ ಪಠ್ಯೇತರದಿಂದ ಯಾವುದೇ ಪ್ರಶ್ನೆಗಳನ್ನು ಕೇಳಬಾರದು. ಯಾವುದೇ ವಿದ್ಯಾರ್ಥಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದಲ್ಲಿ ಅವರನ್ನು ಅದೇ ತರಗತಿಯಲ್ಲಿ ಉಳಿಸದೆ ಮುಂದಿನ ತರಗತಿಗೆ ಕಳುಹಿಸಿಕೊಡಬೇಕು ಎಂದು ಸೂಚನೆ ನೀಡಿದೆ.

ಜೊತೆಗೆ, ಪರೀಕ್ಷಾ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟ ಮಾಡಬಾರದು, ಅದರ ಬದಲಾಗಿ ಶಾಲೆಗಳಿಗೆ ಗೌಪ್ಯವಾಗಿ ರವಾನಿಸಬೇಕು. ಅಲ್ಲದೆ, ಈ ಫಲಿತಾಂಶವನ್ನು ಶಾಲಾ ಆಡಳಿತ ಮಂಡಳಿಯೂ ಸಾರ್ವಜನಿಕವಾಗಿ ಪ್ರಕಟಿಸದೆ ಮಕ್ಕಳಿಗೆ ತಿಳಿಹೇಳಬೇಕು ಎಂದು ಸೂಚನೆ ನೀಡಿದೆ.

error: Content is protected !!