ಗುಂಡ್ಯ : ಹೊಳೆಗೆ ಮೀನು ಹಿಡಿಯಲೆಂದು ಹೋದವರ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿದ ಘಟನೆ ಶಿರಾಡಿ ಎಂಬಲ್ಲಿ ನಡೆದಿದೆ.
ಶಿರಾಡಿ ಗ್ರಾಮದ ಜನತಾ ಕಾಲನಿ ನಿವಾಸಿಗಳಾದ ತಿಮ್ಮಪ್ಪ ( 45) ಮತ್ತು ಅವರ ಪುತ್ರ ಶರಣ್ (18) ಎಂಬವರು ಡಿ.31ರಂದು ಸಾಯಂಕಾಲ ಮೀನು ಹಿಡಿಯುಲು ಗುಂಡ್ಯ ಹೊಳೆ ಬದಿಗೆ ತೆರಳಿದ್ದರು. ಈ ವೇಳೆ ಕಾಡಿನಿಂದ ಹೊಳೆಯತ್ತ ಆಗಮಿಸಿದ್ದ ಒಂಟಿ ಸಲಗವೊಂದು ಶರಣ್ ಮೇಲೆ ದಾಳಿ ಮಾಡಿದೆ. ಈ ವೇಳೆ ರಕ್ಷಣೆಗೆ ಮುಂದಾದ ತಿಮ್ಮಪ್ಪ ಅವರನ್ನೂ ಕೆಡವಿ ಕಾಲಿನಿಂದ ಒಸಕಿ ಗಂಭೀರವಾಗಿ ಗಾಯಗೊಳಿಸಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಶರಣ್ ಪ್ರಾಣಾಪಾಯದಿಂದ ಪಾರಾಗಿದ್ದು ನೆಲ್ಯಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಮತ್ತವರ ತಂಡ ಭೇಟಿ ನೀಡಿದ್ದು, ಗಾಯಾಳುಗಳ ಚಿಕಿತ್ಸೆಗೆ ಸಂಬಂಧಿಸಿ ಇಲಾಖಾ ಕ್ರಮ ಕೈಗೊಂಡಿದ್ದಾರೆ.