ಸಾಂದರ್ಭಿಕ ಚಿತ್ರ
ಮಂಗಳೂರು : ಅಕ್ರಮ ಮರಳು ದಂಧೆಕೊರರ ಜೊತೆ ಅಧಿಕಾರಿಗಳು ಹಣ ಪಡೆದು ಶಾಮಿಲಾಗಿದ್ದಾರೆ ಎಂಬ ದೂರು ಮಂಗಳೂರು ಲೋಕಾಯುಕ್ತ ಇಲಾಖೆಗೆ ಬಂದ ಮೇರೆಗೆ ಲೋಕಾಯುಕ್ತ ಪೊಲೀಸರ ತಂಡ ನ. 08ರಂದು ಜಿಲ್ಲೆಯ ಮೂರು ತಾಲೂಕಿನ ಮರಳು ಅಡ್ಡೆ ಮೇಲೆ ದಾಳಿ ನಡೆಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ , ಮೂಡಬಿದಿರೆ , ಬೆಳ್ತಂಗಡಿ ತಾಲೂಕಿನಲ್ಲಿ ಮೂರು ತಂಡಗಳಾಗಿ ದಾಳಿ ಮಾಡಿದ್ದು ಈ ವೇಳೆ ಟಿಪ್ಪರ್, ದೋಣಿ ವಶಪಡಿಸಿಕೊಂಡು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಜಾಹೀರಾತು
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ, ಪುದುವೆಟ್ಟು, ಕಕ್ಕಿಂಜೆ , ಮುಂಡಾಜೆ ,ವೇಣೂರು ಕಡೆಗಳಲ್ಲಿ ಲೋಕಾಯಕ್ತ ಡಿವೈಎಸ್ಪಿ ಚೆಲುವರಾಜ್ ಮತ್ತು ತಂಡ ದಾಳಿ ಮಾಡಿದ್ದು. ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಳಿಯ ಹೊಳೆ ಬದಿ ಮರಳು ದಂಧೆ ನಡೆಸುತ್ತಿದ್ದಾಗ ಮರಳು ತುಂಬಿದ್ದ ಎರಡು ಟಿಪ್ಪರ್ ವಾಹನ ಮತ್ತು ಒಂದು ದೋಣಿ ವಶಕ್ಕೆ ಪಡೆದು ಧರ್ಮಸ್ಥಳ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.
ಬಂಟ್ವಾಳ ತಾಲೂಕಿನ ತುಂಬೆ ಸೇರಿದಂತೆ ವಿವಿಧ ಕಡೆ ಲೋಕಾಯುಕ್ತ ಇನ್ಸ್ಪೆಕ್ಟರ್ ಅಮಾನುಲ್ಲಾ ಮತ್ತು ತಂಡ ದಾಳಿ ಮಾಡಿದ್ದು ಈ ವೇಳೆ ಒಂದು ಮರಳು ತೆಗೆಯುತ್ತಿದ್ದ ದೋಣಿಯನ್ನು ವಶಕ್ಕೆ ಪಡೆದು ಬಂಟ್ವಾಳ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಮೂಡಬಿದಿರೆ ತಾಲೂಕಿನ ಎಡಪದವು , ಕೈಕಂಬ , ಅಡ್ಯಾರು ಸೇರಿದಂತೆ ವಿವಿಧೆಡೆ ಲೋಕಾಯಕ್ತ ಡಿವೈಎಸ್ಪಿ ಕಲಾವತಿ ಮತ್ತು ತಂಡ ದಾಳಿ ಮಾಡಿದ್ದಾರೆ.
ಲೋಕಾಯಕ್ತ ದಾಳಿ ವಿಚಾರ ತಿಳಿದು ಹಲವು ಕಡೆಗಳಲ್ಲಿ ಮರಳು ದಂಧೆಕೊರರು ತಕ್ಷಣ ಕಾರ್ಯಪ್ರವೃತ್ತರಾಗಿ ಮರಳು ,ಟಿಪ್ಪರ್ ಸಹಿತ ದೋಣಿಗಳನ್ನು ಖಾಲಿ ಮಾಡಿ ಪರಾರಿಯಾಗಿದ್ದು ಅಂತಹ ಅಡ್ಡೆಗಳ ಮೇಲೆ ನಿಗಾ ಇಡಲಾಗುವುದು. ಮುಂದೆ ಮರಳುಗಾರಿಕೆ ಬಗ್ಗೆ ಮಾಹಿತಿ ಬಂದರೆ ಮುಲಾಜಿಲ್ಲದೆ ದಾಳಿ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೀಶ್ ನಿರ್ದೇಶನದಲ್ಲಿ ಡಿವೈಎಸ್ಪಿ ಕಲಾವತಿ, ಡಿವೈಎಸ್ಪಿ ಚೆಲುವರಾಜ್, ಇನ್ಸ್ಪೆಕ್ಟರ್ ಅಮನುಲ್ಲಾ ಮತ್ತು ಸಿಬ್ಬಂದಿಗಳು ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.