ಧರ್ಮಸ್ಥಳದಿಂದ ಗ್ರಾಮೀಣ ಭಾಗದ 365 ಶಾಲೆಗಳಿಗೆ ಪೀಠೋಪಕರಣ ವಿತರಣೆ : 2.50 ಕೋಟಿ ರೂ. ಮೊತ್ತದ 2770 ಜೊತೆ ಪೀಠೋಪಕರಣ: ಧರ್ಮಸ್ಥಳದಿಂದಲೇ ಪ್ರತೀ ಶಾಲೆಗಳಿಗೆ ಸಾಗಾಟ ವ್ಯವಸ್ಥೆ

ಉಜಿರೆ: ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ಗ್ರಾಮೀಣ ಪ್ರದೇಶದ 365 ಸರ್ಕಾರಿ ಶಾಲೆಗಳಿಗೆ ಧರ್ಮಸ್ಥಳದಿಂದ ಎರಡೂವರೆ ಕೋಟಿ ರೂ. ಮೊತ್ತದ 2770 ಜೊತೆ ಪೀಠೋಪಕರಣಗಳನ್ನು ಡಿ.4 ರಂದು ವಿತರಿಸಲಾಗಿದೆ.

ಧರ್ಮಸ್ಥಳದಿಂದ ಪ್ರತಿವರ್ಷ ಸುಮಾರು 400 ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುತ್ತಿದ್ದು ಈ ಬಾರಿಯೂ ದೀರ್ಘ ಬಾಳಿಕೆ ಬರುವ ಹಾಗೂ ಹಗುರವಾದ ಫೈಬರ್ ಬೆಂಚು, ಡೆಸ್ಕ್ಗಳನ್ನು ಧರ್ಮಸ್ಥಳದ ವತಿಯಿಂದಲೆ ಶಾಲೆಗಳಿಗೆ ಸಾಗಾಟ ಮಾಡುವ ವ್ಯವಸ್ಥೆ ಮಾಡಿ ಕಳುಹಿಸಿಕೊಡಲಾಗಿದೆ.

ಈ ವೇಳೆ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗೆಡೆಯವರು ‘ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಮಹತ್ವಪೂರ್ಣ ಹಾಗೂ ಭದ್ರ ಬುನಾದಿಯಾಗಿದ್ದು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಸಮುದಾಯ ಅಭಿವೃದ್ಧಿ ವಿಭಾಗದಿಂದ ಪ್ರತಿವರ್ಷ ಸುಮಾರು 400 ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಶೌಚಾಲಯಗಳ ನಿರ್ಮಾಣ, ಶಿಕ್ಷಕರ ನೇಮಕಾತಿ, ಶಾಲಾ ಕಟ್ಟಡ ನಿರ್ಮಾಣ, ಆವರಣ ಗೋಡೆ, ಆಟದ ಮೈದಾನ ರಚನೆ, ಕ್ರೀಡಾ ಸಾಮಾಗ್ರಿಗಳ ಪೂರೈಕೆ ಮೊದಲಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ರಾಜ್ಯದಲ್ಲಿ ಈವರೆಗೆ 10,334 ಶಾಲೆಗಳಿಗೆ 65,144 ಜೊತೆ ಬೆಂಚು, ಡೆಸ್ಕ್ಗಳನ್ನು ಪೂರೈಸಿದ್ದು ಇದಕ್ಕಾಗಿ 21 ಕೋಟಿ 22 ಲಕ್ಷ ರೂ. ಪೂರಕ ಅನುದಾನ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್. ಹೆಚ್. ಮಂಜುನಾಥ್, ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಸಮುದಾಯ ಅಭಿವೃದ್ಧಿ ವಿಭಾಗದ ಆನಂದ ಸುವರ್ಣ ಮತ್ತು ಮೂಡಬಿದ್ರೆ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಉಪಸ್ಥಿತರಿದ್ದರು.

error: Content is protected !!